ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ ನಡುಕ ಹುಟ್ಟಿಕೊಳ್ಳುತ್ತೆ. ಆರೋಗ್ಯ ವಂತರು ಕೂಡ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಕೆಲವೇ ದಿನಗಳಲ್ಲಿ ಕೊನೆಯುಸಿರೆಳೆಯುತ್ತಿದ್ದಾರೆ. ಕ್ಯಾನ್ಸರ್ ಆರಂಭದಲ್ಲಿ ಚಿಕಿತ್ಸೆ ಇದ್ದರೂ, ವಿವಿಧ ರೀತಿಯ ಕ್ಯಾನ್ಸರ್ಗಳಿಗೆ ಇಂದಿಗೂ ಚಿಕಿತ್ಸೆ ಇಲ್ಲದೆ ರೋಗಿಗಳು ಸಾವಿನ ಕದ ತಟ್ಟುತ್ತಾರೆ.
ಆದರೆ ಕ್ಯಾನ್ಸರ್ಗೆ ಔಷಧಿ ಕಂಡುಹಿಡಿಯುವ ಕಾರ್ಯ ದಶಕಗಳಿಂದಲೂ ನಡೆಯುತ್ತಿದೆ. ಈ ನಡುವೆ ರಷ್ಯಾ ಕ್ಯಾನ್ಸರ್ನ ಒಂದು ವಿಧಕ್ಕೆ ಚುಚ್ಚು ಮದ್ದು ಕಂಡುಹಿಡಿದಿರುವುದಾಗಿ ಹೇಳಿತ್ತು, ಆದರೆ ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ವರದಿಯಾಗಿಲ್ಲ. ಆದರೆ ಇದೀಗ ಭಾರತದಲ್ಲಿ ಕ್ಯಾನ್ಸರ್ಗೆ ಔಷಧಿ ಕಂಡು ಹಿಡಿದಿರುವ ಕುರಿತು ಸುದ್ದಿ ಹೊರ ಬಿದ್ದಿದ್ದು ಇದು ಕೋಟ್ಯಾಂತರ ರೋಗಿಗಳ ಮುಖದಲ್ಲಿ ಆಶ ಕಿರಣ ಮುಡಿಸಿದೆ.
ಟಾಟಾ ಮೆಮೋರಿಯಲ್ ಸೆಂಟರ್ನ ಸಂಶೋದಕರು ಕ್ಯಾನ್ಸರ್ ಮಾತ್ರೆ ಕಂಡುಕೊಂಡಿದಿದ್ದು ಈ ಬಗ್ಗೆ ಟಾಟಾ ಮೆಮೋರಿಯಲ್ ಸೆಂಟರ್ನ ನಿರ್ದೇಶಕ ಡಾ. ರಾಜೇಂದ್ರ ಬಡ್ವೆ ಟಿವಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಈ ಮಾತ್ರೆಯು ಸಂಭಾವ್ಯ ಕ್ಯಾನ್ಸರ್ ರೋಗಿಗಳಿಗೆ ಯಾವುದೇ ಅಡ್ಡಪರಿಣಾಮವಿಲ್ಲದೆ ಬಳಸಬಹುದು. ಹಾಗೂ ಕ್ಯಾನ್ಸರ್ ಪುನರುತ್ಥಾನ ಅಥವಾ ಮರುಕಳಿಸುವಿಕೆಯನ್ನು ತಡೆಯಲು ಅಭಿವೃದ್ಧಿ ಪಡಿಸಲಾಗಿದೆ ಎಂದಿದ್ದಾರೆ.
ಒಂದು ಮಾತ್ರೆಯ ಬೆಲೆ 100 ರೂಪಾಯಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಟಾಟಾ ಮೆಮೋರಿಯಲ್ ಹಾಸ್ಪಿಟಲ್ (ಟಿಎಮ್ಹೆಚ್) ವೈದ್ಯರ ಒಂದು ದಶಕದ ಸುದೀರ್ಘ ಸಂಶೋಧನಾ ಅಧ್ಯಯನವು ಸಾಯುತ್ತಿರುವ ಕ್ಯಾನ್ಸರ್ ಕೋಶಗಳು ಕೀಮೋಥೆರಪಿ ಮತ್ತು ರೇಡಿಯೊಥೆರಪಿ ನಂತರ ಜೀವಕೋಶ-ಮುಕ್ತ ಕ್ರೊಮಾಟಿನ್ ಕಣಗಳನ್ನು ಬಿಡುಗಡೆ ಮಾಡುತ್ತವೆ ಎಂದು ಕಂಡುಹಿಡಿದಿದೆ, ಅದು ಆರೋಗ್ಯಕರ ಕೋಶಗಳನ್ನು ಕ್ಯಾನ್ಸರ್ ಆಗಿ ಪರಿವರ್ತಿಸುತ್ತದೆ.
ಈ ಮಾತ್ರೆಯು ಕ್ಯಾನ್ಸರ್ ಚಿಕಿತ್ಸೆಯ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಲು ಜೂನ್-ಜುಲೈನಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಅನುಮೋದನೆ ಪಡೆಯುವ ಸಾಧ್ಯತೆಯಿದೆ. ಒಮ್ಮೆ ಅನುಮೋದಿಸಿದ ಮಾತ್ರೆಯು ಕೀಮೋಥೆರಪಿಯಂತಹ ಚಿಕಿತ್ಸೆಗಳ ಅಡ್ಡಪರಿಣಾಮಗಳನ್ನು ಶೇಕಡಾ 50ರಷ್ಟು ಮತ್ತು ಕ್ಯಾನ್ಸರ್ ಮರುಕಳಿಸುವಿಕೆಯ ಸಾಧ್ಯತೆಯನ್ನು ಶೇ. 30ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದಿದ್ದಾರೆ. ಸದ್ಯ ಬಳಕೆಯಲ್ಲಿ ಅತ್ಯಂತ ಕಡಿಮೆ ಬೆಲೆಯ ಔಷಧಿ ಇದಾಗಿದೆ.
ಟಾಟಾ ಮೆಮೋರಿಯಲ್ ಹಾಸ್ಪಿಟಲ್ ವೈದ್ಯರ ದಶಕದ ಸುದೀರ್ಘ ಸಂಶೋಧನಾ ಅಧ್ಯಯನವು ಸಾಯುತ್ತಿರುವ ಕ್ಯಾನ್ಸರ್ ಕೋಶಗಳು ಕೀಮೋಥೆರಪಿ ಮತ್ತು ರೇಡಿಯೊಥೆರಪಿಯ ನಂತರ ಜೀವಕೋಶಗಳಿಲ್ಲದ ಕ್ರೊಮಾಟಿನ್ ಕಣಗಳನ್ನು ಬಿಡುಗಡೆ ಮಾಡುತ್ತವೆ ಎಂದು ಕಂಡು ಹಿಡಿದಿದ್ದಾರೆ. ಇವು ಆರೋಗ್ಯಕರ ಕೋಶಗಳನ್ನೂ ಸಹ ಕ್ಯಾನ್ಸರ್ ಕೋಶಗಳಾಗಿ ಪರಿವರ್ತಿಸುವ ಕಾರ್ಯ ಮಾಡಲಿವೆ. ಆದರೆ ರೆಸ್ವೆರಾಟ್ರೊಲ್ ಮತ್ತು ತಾಮ್ರದ ಪ್ರೊ-ಆಕ್ಸಿಡೆಂಟ್ ಸಂಯೋಜನೆಯು ಕ್ರೊಮಾಟಿನ್ ಕಣವನ್ನು ನಾಶಮಾಡಲು ಮತ್ತು ಕೀಮೋಥೆರಪಿಗೆ ಒಳಗಾಗುವ ರೋಗಿಗಳಲ್ಲಿ ಅಡ್ಡ ಪರಿಣಾಮ ನಿಯಂತ್ರಿಸಲು ಸಹಾಯ ಮಾಡಿದೆ ಎಂದು ತಿಳಿದುಬಂದಿದೆ.
ಈ ಅಧ್ಯಯನಕ್ಕಾಗಿ ಮೂರು ಇಲಿಗಳ ಬಳಸಲಾಗಿದೆ. ಅಂದರೆ ಮಾನವ ಸ್ತನ ಕ್ಯಾನ್ಸರ್ನ ಕೋಶಗಳನ್ನು ಇಲಿಗಳಿಗೆ ಹಾಕಿ ಪ್ರಯೋಗ ಮಾಡಲಾಗಿದೆ. ಈ ಕ್ಯಾನ್ಸರ್ ಕೋಶಗಳನ್ನು ಒಂದೊಂದು ಇಲಿಯಲ್ಲಿ ಒಂದೊಂದು ರೀತಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಕೀಮೋಥೆರಪಿ, ರೇಡಿಯೊಥೆರಪಿ ಮತ್ತು ಶಸ್ತ್ರ ಚಿಕಿತ್ಸೆ ನೆರವೇರಿಸಿ ಅವುಗಳ ಗುಣಪಡಿಸಲಾಗಿದೆ. ಆದರೆ ಈ ಚಿಕಿತ್ಸೆಯ ಬಳಿಕ ಇಲಿಗಳ ಮೆದುಳಿನಲ್ಲಿ ಕ್ರೊಮಾಟಿನ್ ಕಣಗಳು ಹೆಚ್ಚಾಗುವುದನ್ನು ಅಧ್ಯಯನ ತಂಡ ಗುರುತಿಸಿದೆ.
ರೆಸ್ವೆರಾಟ್ರೊಲ್ ಮತ್ತು ತಾಮ್ರದ ಸಂಯೋಜನೆಯು ಕ್ರೊಮಾಟಿನ್ ಅನ್ನು ನಾಶಮಾಡಲು ಸಹಾಯ ಮಾಡುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ. ಆದರೆ ಇದನ್ನು ಮಾನವರ ಮೇಲೆ ಪರೀಕ್ಷಿಸುವುದು ಇನ್ನೂ ಬಾಕಿ ಇದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ. ಆಧರೆ ಈ ಔಷಧ ಬಳಕೆ ಯೋಗ್ಯವಾಗಬೇಕಾದರೆ ಇನ್ನೂ ಒಂದೆರಡು ವರ್ಷ ಕಾಯ ಬೇಕಿದೆ.