ಒಟ್ಟಾವ: ಇಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಲಿಬರಲ್ ಪಾರ್ಟಿ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜಸ್ಟಿನ್ ಟ್ರೂಡೊ ನಿಖರವಾಗಿ ಯಾವಾಗ ರಾಜೀನಾಮೆ ಸಲ್ಲಿಸುತ್ತಾರೆ ಎಂದು ನಮಗೆ ತಿಳಿದಿಲ್ಲ. ಆದರೆ, ಬುಧವಾರ ನಡೆಯಲಿರುವ ಪಕ್ಷದ ರಾಷ್ಟ್ರೀಯ ಸಭೆಗೂ ಮುನ್ನ ರಾಜೀನಾಮೆ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಟ್ರೂಡೋ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಲು ಪ್ರಧಾನ ಮಂತ್ರಿ ಕಚೇರಿ ನಿರಾಕರಿಸಿದೆ. ಒಂದು ವೇಳೆ ಟ್ರೂಡೊ ತಮ್ಮ ಹುದ್ದೆಯನ್ನು ತಕ್ಷಣವೇ ತೊರೆಯಲಿದ್ದಾರೆಯೊ ಅಥವಾ ನೂತನ ನಾಯಕನ ಆಯ್ಕೆಯಾಗುವವರೆಗೂ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆಯೊ ಎಂಬುದಿನ್ನೂ ಸ್ಪಷ್ಟವಾಗಿಲ್ಲ ಎಂದೂ ವರದಿಗಳು ಹೇಳಿವೆ.
2013ರಲ್ಲಿ ಲಿಬರಲ್ ಪಾರ್ಟಿಯು ತೀವ್ರ ಬಿಕ್ಕಟ್ಟಿನಲ್ಲಿದ್ದಾಗ ಹಾಗೂ ಹೌಸ್ ಆಫ್ ಕಾಮನ್ಸ್ ನಲ್ಲಿ ಮೂರನೆಯ ಸ್ಥಾನಕ್ಕೆ ಕುಸಿದಿದ್ದಾಗ ಜಸ್ಟಿನ್ ಟ್ರೂಡೊ ಲಿಬರಲ್ ಪಾರ್ಟಿಯ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಪ್ರಸ್ತುತ ಲಿಬರಲ್ ಪಕ್ಷವು ಕೆನಡಾ ಸಂಸತ್ತಿನ ಹೌಸ್ ಆಫ್ ಕಾಮನ್ಸ್ನಲ್ಲಿ 153 ಸಂಸದರನ್ನು ಹೊಂದಿದೆ. ಕೆನಡಾದ ಹೌಸ್ ಆಫ್ ಕಾಮನ್ಸ್ನಲ್ಲಿ 338 ಸ್ಥಾನಗಳಿವೆ. ಇದರಲ್ಲಿ ಬಹುಮತವು 170 ಆಗಿದೆ.
ಕೆಲವು ತಿಂಗಳ ಹಿಂದೆ, ಟ್ರೂಡೊ ಸರ್ಕಾರದ ಮಿತ್ರ ಪಕ್ಷವಾದ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್ಡಿಪಿ) ತನ್ನ ಬೆಂಬಲವನ್ನು ಹಿಂಪಡೆದಿತ್ತು. ಎನ್ಡಿಪಿ ಖಲಿಸ್ತಾನಿ ಪರ ಕೆನಡಾದ ಸಿಖ್ ಸಂಸದ ಜಗ್ಮೀತ್ ಸಿಂಗ್ ಅವರ ಪಕ್ಷವಾಗಿದೆ.