ಇತ್ತೀಚಿನ ಅಧ್ಯಯನಗಳ ಪ್ರಕಾರ, ಬಾದಾಮಿಯ ನಿಯಮಿತ ಸೇವನೆಯಿಂದ ಮಧುಮೇಹ ಪೂರ್ವ ಹಂತದಲ್ಲಿರುವ ವ್ಯಕ್ತಿಳಿಗೆ ಮಧುಮೇಹ ಸಂಬಂಧಿತ ತೊಂದರೆಗಳು ಎದುರಾಗುವ ಸಾಧ್ಯತೆ ಕಡಿಮೆಗೊಳ್ಳುತ್ತದೆ. ವಿಶೇಷವಾಗಿ ಯುವ ಜನಾಂಗ ಈ ಅಭ್ಯಾಸದಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ:
ಕೊಂಚ ದುಬಾರಿ ಎಂಬ ಒಂದೇ ಅಂಶವನ್ನು ಬಿಟ್ಟರೆ ಬಾದಾಮಿ ತಿನ್ನದೇ ಇರಲು ಯಾವುದೇ ಕಾರಣ ಉಳಿಯುವುದಿಲ್ಲ. ಇದು ಅತ್ಯಂತ ಆರೋಗ್ಯಕರ ಅಹಾರವಾಗಿದೆ ಹಾಗೂ ನಿತ್ಯವೂ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಉತ್ತಮಗೊಳಿಸುವುದು, ಕೊಲೆಸ್ಟ್ರಾಲ್ ನಿಯಂತ್ರಣ, ಮೂಳೆಯ ಆರೋಗ್ಯ ವೃದ್ದಿಸುವುದು ಹಾಗೂ ತೂಕ ಇಳಿಕೆಯ ಪ್ರಯತ್ನಗಳಿಗೆ ಹೆಚ್ಚಿನ ಬೆಂಬಲ ಒದಗಿಸುವುದು ಈ ಪ್ರಯೋಜನಗಳಲ್ಲಿ ಕೆಲವು.
ಕ್ಯಾಲೋರಿಗಳು: 161
ನಾರಿನ ಅಂಶ : 3.5 ಗ್ರಾಂ
ಪ್ರೋಟೀನ್: 6 ಗ್ರಾಂ
ಕಾರ್ಬೋಹೈಡ್ರೇಟುಗಳು : 2.5 ಗ್ರಾಂ
ಕೊಬ್ಬು: 14 ಗ್ರಾಂ
ನಿತ್ಯದ ಶಿಫಾರಸ್ಸು ಮಾಡಲ್ಪಟ್ಟ ಪ್ರಮಾಣದ 37% ವಿಟಮಿನ್ ಇ
ನಿತ್ಯದ ಶಿಫಾರಸ್ಸು ಮಾಡಲ್ಪಟ್ಟ ಪ್ರಮಾಣದ 32% ಮೆಗ್ನೀಶಿಯಮ್
ಈ ಅಧ್ಯಯನವನ್ನು ಮುಂಬೈಯ ವಿಶ್ವವಿದ್ಯಾಲಯದಲ್ಲಿ ನಡೆಸಲಾಗಿದ್ದು ಇದಕ್ಕಾಗಿ 16-25 ವರ್ಷದ ನಡುವಿನ ವ್ಯಕ್ತಿಗಳ ಆಹಾರಕ್ರಮ ಮತ್ತು ಆರೋಗ್ಯ ಮಾಹಿತಿಗಳನ್ನು ಕಲೆಹಾಕಿ ವಿಶ್ಲೇಷಿಸಲಾಗಿತ್ತು. ನಿತ್ಯವೂ ಬಾದಾಮಿ ತಿನ್ನುವ ಅಭ್ಯಾಸ ಇರುವ ವ್ಯಕ್ತಿಗಳಲ್ಲಿ ಗ್ಲುಕೋಸ್ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಂಡಿರುವುದನ್ನು ಗಮನಿಸಲಾಗಿದೆ. ಮಧುಮೇಹ-ಪೂರ್ವ ಸ್ಥಿತಿಯಲ್ಲಿರುವ ವ್ಯಕ್ತಿಗಳಲ್ಲಿಯೂ ಇದೇ ಕ್ರಮವನ್ನು ಗಮನಿಸಲಾಗಿದೆ.
ಈ ಅಧ್ಯಯನದಲ್ಲಿ ಜೀವ ರಾಸಾಯನಿಕ ಅಪಮಾನ್ಯ ಕ್ರಿಯೆ (ಮೆಟಬಾಲಿಕ್ ಡಿಸ್ಫಂಕ್ಷನ್) ಮತ್ತು ಆಯ್ದ ಉರಿಯೂತದ ಮಾರ್ಕರ್ ಅಥವಾ ಗುರುತುಗಳಲ್ಲಿ ಆಗುವ ಪರಿಣಾಮಗಳನ್ನು ನಿಯಂತ್ರಿತ ಪ್ರಯೋಗಳ ಮೂಲಕ ಪರಿಶೀಲಿಸಲಾಗಿತ್ತು. ಇದಕ್ಕಾಗಿ ಒಂದು ಗುಂಪಿನ ವ್ಯಕ್ತಿಗಳನ್ನು ಆಯ್ದು ನಿತ್ಯವೂ 56 ಗ್ರಾಂ (ಸುಮಾರು 340 ಕ್ಯಾಲೋರಿಗಳು) ಹುರಿಯದೇ ಇರುವ ಬಾದಾಮಿಗಳನ್ನು ದಿನದ ಒಂದೇ ಸಮಯದಲ್ಲಿ ಸೇವಿಸುವಂತೆ ಕೇಳಿಕೊಳ್ಳಲಾಗಿತ್ತು. ಇನ್ನೊಂದು ಗುಂಪಿನ ವ್ಯಕ್ತಿಗಳಿಗೆ ಎಂದಿನ ಕುರುಕು ತಿಂಡಿಗಳನ್ನು ತಿನ್ನುವಂತೆ ಕೇಳಿಕೊಳ್ಳಲಾಗಿತ್ತು.
ಈ ವ್ಯಕ್ತಿಗಳ ತೂಕ, ಎತ್ತರ, ಸೊಂಟದ ಅಳತೆ, ಉಪವಾಸ ಇದ್ದಾಗ ರಕ್ತದಲ್ಲಿ ಗ್ಲುಕೋಸ್ ಮಟ್ಟ ಮೊದಲದವನ್ನು ನಿತ್ಯವೂ ದಾಖಲಿಸಲಾಗುತ್ತಿತ್ತು. ಇದರಲ್ಲಿ ಬೇರೆ ಯಾವುದೇ ಮಾಹಿತಿಗಳಲ್ಲಿ ಗಣನೀಯ ಬದಲಾವಣೆ ಕಂಡುಬರದೇ ಇದ್ದರೂ ನಿತ್ಯವೂ ಬಾದಾಮಿ ತಿನ್ನುವ ಗುಂಪಿನ ವ್ಯಕ್ತಿಗಳಲ್ಲಿ ಮಾತ್ರ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಗಮನಾರ್ಹವಾಗಿ ಕಡಿಮೆ ಇದ್ದುದನ್ನು ಗಮನಿಸಲಾಯ್ತು. ಒಟ್ಟಾರೆ ಕೊಲೆಸ್ಟಾಲ್ ಮತ್ತು ಕೆಟ್ಟ ಕೊಲೆಸ್ಟಾಲ್ ಅಥವಾ ಎಲ್ ಡಿ ಎಲ್ ಕೊಲೆಸ್ಟ್ರಾಲ್ ನಡುವೆ ಇರುವ ವ್ಯತ್ಯಾಸವನ್ನೂ ಕೆಲವು ವ್ಯಕ್ತಿಗಳಲ್ಲಿ ಗಮನಿಸಲಾಯ್ತು.
ಈ ಮೂಲಕ ನಿತ್ಯವೂ ಬಾದಾಮಿ ತಿಂದರೆ ಉಪವಾಸದ ಅವಧಿಯಲ್ಲಿ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಕಡಿಮೆ ಆಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಯ್ತು ಹಾಗೂ ಇವರ ಜೀವರಾಸಾಯನಿಕ ಮಾರ್ಕರ್ ನಲ್ಲಿ ಅತಿ ಕಡಿಮೆ ಬದಲಾವಣೆಗಳನ್ನು ಗಮನಿಸಲಾಯ್ತು.
ಮಧುಮೇಹ ಪೂರ್ವ ಸ್ಥಿತಿ ಅತಿ ನಾಜೂಕಿನ ಸ್ಥಿತಿಯಾಗಿದೆ ಹಾಗೂ ಈ ಸ್ಥಿತಿಯಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟ ಅಗತ್ಯಕ್ಕೂ ಮೀರಿದರೆ ಇದನ್ನು ಸಂಸ್ಕರಿಸಲು ಮೇದೋಜೀರಕ ಗ್ರಂಥಿ ತನ್ನ ಸಾಮರ್ಥ್ಯಕ್ಕೂ ಮೀರಿ ಇನ್ಸುಲಿನ್ ಉತ್ಪಾದಿಸಬೇಕಾಗುತ್ತದೆ ಹಾಗೂ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಹೀಗೆ ಸಾಮರ್ಥ್ಯ ಕುಂಠಿತಗೊಂಡಾಗ ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚುತ್ತದೆ. ತಜ್ಞರ ಪ್ರಕಾರ, ಬಾದಾಮಿ ತಿನ್ನುವ ಮೂಲಕ ರಕ್ತದಲ್ಲಿ ಕೆಟ್ಟ ಕೊಲೆಸ್ಟಾಲ್ (ಎಲ್ ಡಿ ಎಲ್ ಅಥವಾ ಲೋ ಡೆನ್ಸಿಟಿ ಲಿಪೋಪ್ರೋಟೀನ್) ಮಟ್ಟ ಕಡಿಮೆಯಾಗುತ್ತದೆ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ. ತನ್ಮೂಲಕ ಉರಿಯೂತ ಕಡಿಮೆಯಾಗುತ್ತದೆ ಮತ್ತು ಹೃದ್ರೋಗ ಆವರಿಸುವ ಸಾಧ್ಯತೆಯೂ ತಗ್ಗುತ್ತದೆ. ಸಾಮಾನ್ಯವಾಗಿ ಈ ಸಾಧ್ಯತೆಗಳು ಮಧುಮೇಹ ಪೂರ್ವ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಹೆಚ್ಚೇ ಇರುತ್ತವೆ.
ಅದರಲ್ಲೂ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆ ಇರುವ ವ್ಯಕ್ತಿಗಳಿಗೆ ಬಾದಾಮಿಯಲ್ಲಿರುವ ಅಧಿಕ ಪ್ರಮಾಣದ ಮೆಗ್ನೀಶಿಯಂ ಹೆಚ್ಚಿನ ನೆರವು ನೀಡುತ್ತದೆ. ಮಧುಮೇಹ ಪೂರ್ವ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಇದು ಇನ್ಸುಲಿನ್ ಸ್ರವಿಕೆಯನ್ನು ನಿಯಂತ್ರಿಸಿ ಅನಿರೀಕ್ಶಿತವಾಗಿ ಮಧುಮೇಹ ಕಂಡುಬರುವುದನ್ನು ತಪ್ಪಿಸುತ್ತದೆ. ಅಲ್ಲದೇ ಇವು ಉತ್ಕರ್ಷಣ ಶೀಲ ಒತ್ತಡ (ಆಕ್ಸಿಡೇಟಿವ್ ಸ್ಟ್ರೆಸ್) ವನ್ನೂ ತಗ್ಗಿಸುತ್ತದೆ. ಮಧುಮೇಹ ಮತ್ತು ಹೃದ್ರೋಗ ಎದುರಾಗಲು ಇದೂ ಒಂದು ಕಾರಣವಾಗಿದೆ. ಈ ಪ್ರಯೋಜನಗಳನ್ನು ಪಡೆಯಲು ನಿತ್ಯವೂ ಒಂದು ಹಿಡಿಯಷ್ಟು ಬಾದಾಮಿಗಳನ್ನು ತಿನ್ನುವುದು ಉತ್ತಮವಾಗಿದೆ.