ಚಾಮರಾಜನಗರ:- ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕ್ಯಾಮೆರಾ, ಡ್ರೋನ್ ಚಿತ್ರೀಕರಣ ನಿಷೇಧ ಮಾಡಲಾಗಿದೆ.
ಈ ಬಗ್ಗೆ ಗುಂಡ್ಲುಪೇಟೆ ತಹಸೀಲ್ದಾರ್ ಟಿ.ರಮೇಶ್ಬಾಬು ಆದೇಶ ಹೊರಡಿಸಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೋರ್ ವಲಯದಲ್ಲಿ ಬರುವ ದೇವಸ್ಥಾನಕ್ಕೆ ಅತಿ ಹೆಚ್ಚು ಭಕ್ತರು, ಪ್ರವಾಸಿಗರು, ಭೇಟಿ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಮತ್ತು ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.
ಸಂಜೆ ವೇಳೆ ದೇವಾಲಯದ ಹತ್ತಿರ ಬರುವ ಕಾಡಾನೆಯ ಬಳಿ ಪ್ರವಾಸಿಗರು ತೆರಳಿ ಛಾಯಾಚಿತ್ರ ತೆಗೆಯುವುದು, ಸೆಲ್ಪಿ ತೆಗೆದು ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಕಾಡಾನೆಯಿಂದ ಜನರಿಗೆ ಮತ್ತು ಜನರಿಂದ ಕಾಡಾನೆಗೂ ತೊಂದರೆಯಾಗಬಹುದು. ವಲಯ ಅರಣ್ಯಾಧಿಕಾರಿಯವರ ಕೋರಿಕೆ ಮೇರೆಗೆ, ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಸುತ್ತಮುತ್ತ ಕಾಡುಪ್ರಾಣಿಗಳನ್ನು ಕ್ಯಾಮೆರಾ ಮತ್ತು ಡೋನ್ ಮೂಲಕ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅತಿ ಎತ್ತರದ ಶಿಖರವಾಗಿದೆ. ಚಾಮರಾಜನಗ ಜಿಲ್ಲೆಯ ಗುಂಡ್ಲುಪೇಟೆ ಬಳಿ ಇರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ವೇಣುಗೋಪಾಲಸ್ವಾಮಿ ದೇವಾಲಯ ಮತ್ತು ಹಚ್ಚ ಹಸಿರಿನಿಂದ ಕೂಡಿದ ನೈಸರ್ಗಿಕ ಪರಿಸರದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.