ಹಾವೇರಿ ನವೆಂಬರ್ 12 (ಕ.ವಾ.): ನವೆಂಬರ್ 13ರಂದು ನಿಗದಿಯಾದ ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮಸ್ಟರಿಂಗ್ ಕಾರ್ಯವು ನವೆಂಬರ್ 12ರಂದು ಶಿಗ್ಗಾಂವ ಪಟ್ಟಣದ ಸವಣೂರ ರಸ್ತೆಯಲ್ಲಿನ ಜೆಎಂಜೆ ಹೈಸ್ಕೂಲ್ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು. ‘ಪ್ರಜಾಪ್ರಭುತ್ವದ ಹಬ್ಬ’ ಎಂದೇ ಬಿಂಬಿತವಾದ ಚುನಾವಣಾ ಕಾರ್ಯದ ಹಿನ್ನೆಲೆಯಲ್ಲಿ ಶಿಗ್ಗಾವಿಯ ಜೆಎಂಜೆ ಶಾಲಾ ಆವರಣದಲ್ಲಿ ನವೆಂಬರ್ 12ರಂದು ಹಬ್ಬದ ಸಂಭ್ರಮ ಕಂಡುಬಂದಿತು.
ಚುನಾವಣಾ ಕಾರ್ಯಕ್ಕೆ ನಿಯೋಜನೆಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಯು ಚುನಾವಣಾ ಸಾಮಗ್ರಿ ಪಡೆದುಕೊಳ್ಳಲು ಮತ್ತು ಭದ್ರತಾ ಕಾರ್ಯಕ್ಕೆ ನಿಯೋಜನೆಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯು ಬೆಳಗ್ಗೆಯಿಂದಲೇ ತಂಡವಾಗಿ ಜೆಎಂಜೆ ಶಾಲಾ ಆವರಣದತ್ತ ಆಗಮಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು.241 ಮತಗಟ್ಟೆಗಳ ಕಾರ್ಯಕ್ಕಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರೆದೊಯ್ಯಲು ಬಸ್ಸುಗಳು, ಮ್ಯಾಕ್ಸಿಕ್ಯಾಬ್ ಮತ್ತು ಇನ್ನೀತರೆ ವಾಹನಗಳು ನವೆಂಬರ್ 11ರ ರಾತ್ರಿಯಿಂದಲೇ ಜೆಎಂಜೆ ಶಾಲಾ ಆವರಣಕ್ಕೆ ಬಂದು ಸೇರಿ ಸಾಲಾಗಿ ನಿಂತಿರುವುದು ಕಂಡು ಬಂದಿತು.
ಶಿಗ್ಗಾಂವ ಉಪ ಚುನಾವಣೆಯ ಸಾಮಾನ್ಯ ವೀಕ್ಷಕರಾದ ಕಮಲ್ ರಾಮ್ ಮೀನಾ, ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರ ಸಮ್ಮುಖದಲ್ಲಿ ಮಸ್ಟರಿಂಗ್ ಪ್ರಕ್ರಿಯೆಯು ಬೆಳಗ್ಗೆಯಿಂದ ಸಂಜೆವರೆಗೆ ಸುವ್ಯವಸ್ಥಿತವಾಗಿ ನಡೆಯಿತು.
74 ವಾಹನಗಳ ಬಳಕೆ:
ಚುನಾವಣಾ ಕಾರ್ಯಕ್ಕೆ ನಿಯೋಜನೆಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹಾಗೂ ಚುನಾವಣಾ ಸಾಮಗ್ರಿಗಳನ್ನು ಒಯ್ಯಲು ಒಟ್ಟು 33 ಬಸ್ ಗಳು, 12 ಮ್ಯಾಕ್ಸಿಕ್ಯಾಬಗಳು, 4 ಕ್ರೂಜರ್ ಗಳು ಹಾಗೂ 25 ಸೆಕ್ಟರ್ ಅಧಿಕಾರಿಗಳ ವಾಹನ ಸೇರಿ ಒಟ್ಟು 74 ವಾಹನಗಳನ್ನು ಬಳಸಲಾಯಿತು.
ಪುನರ್ಮನನ ತರಬೇತಿ:
ಬೇರೆ ಬೇರೆ ಮತಗಟ್ಟೆಗಳಿಗೆ ನಿಯೋಜನೆಯಾದ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಮತ್ತು ಮತಗಟ್ಟೆ ಅಧಿಕಾರಿಗಳಿಗೆ ಸೆಕ್ಟರ್ ವಾರು ಒಂದೆಡೆ ಸೇರಿಸಿ ಅವರಿಗೆ ನಿಯಮಾನುಸಾರ ಬಿಯು ಹಾಗೂ ಸಿಯು ಮತ್ತು ವಿವಿಪ್ಯಾಟ ಸೇರಿದಂತೆ ನಾನಾ ಸಾಮಗ್ರಿಗಳನ್ನು ಹಂಚಿಕೆ ಮಾಡಲಾಯಿತು. ಈ ವೇಳೆ 23 ಸೆಕ್ಟರ್ ಅಧಿಕಾರಿಗಳು ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ಮತ್ತೊಮ್ಮೆ ತರಬೇತಿ ನೀಡಿದರು. ನವೆಂಬರ್ 13ರಂದು ಬೆಳಗ್ಗೆಯಿಂದ ಸಂಜೆವರೆಗೆ ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ನಿರ್ವಹಿಸಬೇಕಾದ ಕಾರ್ಯವೈಖರಿಯ ಬಗ್ಗೆ ಪುನರ್ಮನನ ತರಬೇತಿ ನೀಡಿದರು.
ಜಿಲ್ಲಾಧಿಕಾರಿಗಳ ಭೇಟಿ; ಪರಿಶೀಲನೆ: ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು
ನವೆಂಬರ್ 12ರಂದು ಶಿಗ್ಗಾಂವಿಗೆ ತೆರಳಿ ಅಲ್ಲಿನ ಜೆಎಂಜೆ ಶಾಲೆಯಲ್ಲಿನ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದರು.
ಚುನಾವಣಾ ಕಾರ್ಯಕ್ಕೆ ನಿಯೋಜನೆಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಯು ಸೆಕ್ಟರವಾರು ಸೇರಿದ್ದಲ್ಲಿಗೆ ತೆರಳಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿ, ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯನುಸಾರ ಮತಗಟ್ಟೆಗಳಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ಸಲಹೆ ಮಾಡಿದರು.
ಊಟದ ವ್ಯವಸ್ಥೆ: ಮತದಾನ ಕೇಂದ್ರಗಳ ಕಾರ್ಯಕ್ಕೆ ನಿಯೋಜನೆಯಾದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ಭದ್ರತಾ ಕಾರ್ಯಕ್ಕೆ ನಿಯೋಜನೆಯಾದ ಸಿಬ್ಬಂದಿಗೆ ಶಾಲಾ ಆವರಣದಲ್ಲಿ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಆರೋಗ್ಯ ತಪಾಸಣೆ: ಮಸ್ಟರಿಂಗ್ ಕೇಂದ್ರವಾದ ಜೆಎಂಜೆ ಶಾಲಾ ಆವರಣದಲ್ಲಿ ಸವಣೂರದ ರಾಷ್ಟ್ರೀಯ ಬಾಲ್ಯ ಸ್ವಾಸ್ತ್ಯ ಕಾರ್ಯಕ್ರಮ (ಆರ್ ಬಿ ಎಸ್ ಕೆ) ತಂಡದಿಂದ ಆರೋಗ್ಯ ತಪಾಸಣೆಗೆ ಏರ್ಪಾಡು ಮಾಡಲಾಗಿತ್ತು. ಚುನಾವಣಾ ಕಾರ್ಯದ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯು ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ತಪಾಸಣೆ ಮಾಡಿಸಿದರು.
ಮತಗಟ್ಟೆಗಳತ್ತ ಪಯಣ:
ಚುನಾವಣಾ ಕಾರ್ಯಕ್ಕೆ ನಿಯೋಜನೆಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಯು ಮಧ್ಯಾಹ್ನ ಊಟದ ಬಳಿಕ, ಬಿಯು, ಸಿಯು ಹಾಗೂ ವಿವಿಪ್ಯಾಟ್, ವೋಟರ್ ರಿಜಿಸ್ಟರ್, 17ಎ ರಿಜಿಸ್ಟರ್, ಕವರ್ಸ್, ಮೆಟಲ್ ಶೀಲ್, ಪಿಆರ್ ಓ ಶೀಲ್, ಸ್ವಸ್ತಿಕ್ ಮಾರ್ಕ ಶೀಲ್ ಸೇರಿದಂತೆ ಇನ್ನೀತರೆ ಚುನಾವಣಾ ಸಾಮಗ್ರಿಗಳನ್ನು ಪಡೆದುಕೊಂಡು ಚುನಾವಣಾ ಸಾಮಗ್ರಿ ಪರಿಕರ ಸಮೇತ ತಂಡವಾಗಿ ಆಯಾ ರೂಟಿಗೆ ನಿಗದಿಪಡಿಸಿದ ವಾಹನಗಳಲ್ಲಿ ಪ್ರಯಾಣ ಬೆಳೆಸಿದರು. ಈ ವೇಳೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿಗಳಾದ ಎಲ್. ವೈ. ಶಿರಕೋಳ, ಸಹಾಯಕ ಆಯುಕ್ತರಾದ ಮೊಹ್ಮದ್ ಖಿಜರ್, ತಹಸೀಲ್ದಾರ ಸಂತೋಷ ಹಿರೇಮಠ ಹಾಗೂ ಇತರರು ಇದ್ದರು.