ಬೆಂಗಳೂರು:- ಶನಿವಾರ ನಗರದ ಮಾರುಕಟ್ಟೆಗಳಲ್ಲಿ ಹಬ್ಬಕ್ಕೆ ಹೂ-ಹಣ್ಣು, ದೀಪಗಳು ಹಾಗೂ ಆಕಾಶಬುಟ್ಟಿಗಳ ಖರೀದಿ ಬಿರುಸಾಗಿ ಸಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಜನಸಂದಣಿ ಕಂಡುಬಂತು.
ಕೆ.ಆರ್. ಮಾರುಕಟ್ಟೆ, ಯಶವಂತಪುರ, ಮಲ್ಲೇ ಶ್ವರ, ಬಸವನಗುಡಿ, ಮಡಿವಾಳ, ಮಾಗಡಿ ರಸ್ತೆ, ವಿಜಯನಗರ ಸೇರಿ ನಗರದ ನಾನಾ ಭಾಗಗಳ ಪ್ರಮುಖ ಮಾರುಕಟ್ಟೆಗಳಲ್ಲಿ ಜನದಟ್ಟಣೆಯಿಂದ ವಾಹನಸವಾರರು ಪರದಾಡುವಂತಾಯಿತು.
ಪೂಜೆಗೆ ಬೇಕಾದ ಹೂವು, ಹಣ್ಣು, ಬೂದುಗುಂಬಳ, ಬಾಳೆಕಂದು, ಅಂಗಡಿಗಳಲ್ಲಿ ಜನರು ಖರೀದಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ಆಯುಧಪೂಜೆ ಹಾಗೂ ವಿಜಯದಶಮಿಯಂದು ವಾಹನ ಹಾಗೂ ಅಂಗಡಿ ಮಳಿಗೆಗಳು, ಕಾರ್ಖಾನೆಗಳಲ್ಲಿ ಪೂಜೆ ಮಾಡಿದರೆ, ಹಲವರು ದೀಪಾವಳಿಯಲ್ಲಿ ಮಾಡುತ್ತಾರೆ. ಹಾಗಾಗಿ ಅಂಗಡಿಗಳಲ್ಲಿ ಸಿಹಿತಿನಿಸುಗಳ ಖರೀದಿಯೂ ಹೆಚ್ಚಿತ್ತು.
ಹೂ ಬೆಳೆಗಾರರಿಗೆ ಸಂಕಷ್ಟ: ಈ ಬಾರಿ ತರಕಾರಿ ಬೆಳೆಗಾರರೆಲ್ಲ ಹೂವಿನ ಬೆಳೆಯತ್ತ ವಾಲಿದ್ದರಿಂದ ಯಥೇಚ್ಚ ಪ್ರಮಾಣದ ಹೂವು ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಹೂವಿನ ಬೆಲೆ ಸಗಟು ದರದಲ್ಲಿ ಇಳಿಕೆಯಾಗಿದೆ. ಸಗಟು ದರದಲ್ಲಿ ಸೇವಂತಿಗೆ ಕೆ.ಜಿ. ಹೂವಿಗೆ ಕೇವಲ 30-50 ರೂ. ಇದೆ. ಉಳಿದಂತೆ ಕನಕಾಂಬರ, ಮಲ್ಲಿಗೆ, ಕಾಕಡ ಬೆಲೆ ಸ್ವಲ್ಪ ಏರಿಕೆಯಾಗಿದೆ. ಈ ಹಿಂದೆ ಚಿಕ್ಕಬಳ್ಳಾಪುರ, ಆನೇಕಲ್, ತುಮಕೂರು, ಬೆಂಗಳೂರು ಸುತ್ತಮುತ್ತಲಿಂದ ಮಾತ್ರ ಹೂವು ಬರುತ್ತಿತ್ತು. ಇದೀಗ ಚಿತ್ರದುರ್ಗ, ಗೌರಿಬಿದನೂರು, ಚಾಮರಾಜನಗರ ಸೇರಿ ರಾಜ್ಯದ ಯಾವ ಭಾಗಕ್ಕೆ ಹೋದರೂ ಹೂವು ಕಾಣುತ್ತದೆ
ಈ ಬಾರಿ ಆಂಧ್ರ, ತಮಿಳುನಾಡಿನಲ್ಲೂ ಸಮೃದ್ಧವಾಗಿ ಹೂವಿನ ಬೆಳೆ ಆಗಿದೆ. ಹೀಗಾಗಿ, ಹೂವಿನ ಬೆಲೆಗಳು ಇಳಿಕೆಯಾಗಿದೆ