ಧಾರವಾಡ: ನಿಗದಿತ ಸಮಯಕ್ಕೆ ಬಸ್ ಬಾರದೇ ಇರುವುದರಿಂದ ಕಂಗಾಲಾದ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಏಕಾಏಕಿ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆದಿದೆ. ಈ ಮೊದಲು ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಮೂರ್ನಾಲ್ಕು ಬಸ್ಗಳು ನಿರಂತರವಾಗಿ ಸಂಚರಿಸುತ್ತಿದ್ದವು.
ಆದರೆ, ಈಗ ಬೆಳಿಗ್ಗೆ 8 ಗಂಟೆಯ ಬಸ್ ಧಾರವಾಡದತ್ತ ಹೊರಟು ಹೋದರೆ ಮುಂದೆ 10 ಗಂಟೆಯವರೆಗೂ ಯಾವುದೇ ಬಸ್ಸಿನ ಸೌಕರ್ಯವಿಲ್ಲ. ಹೀಗಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಿಗದಿತ ಸಮಯಕ್ಕೆ ಕಾಲೇಜಿಗೆ ಹೋಗಲು ಆಗುತ್ತಿಲ್ಲ ಎಂದು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಂದು ಏಕಾಏಕಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ 9 ಗಂಟೆ ಹಾಗೂ 10 ಗಂಟೆಗೆ ಎರಡು ಬಸ್ಸಿನ ಅವಶ್ಯಕತೆ ಇದೆ. ಈ ಎರಡು ಬಸ್ಸುಗಳು ಬಂದರೆ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಕಾಲೇಜಿಗೆ ಹೋಗಲು ಅನುಕೂಲವಾಗುತ್ತದೆ. ಈ ಸಂಬಂಧ ಡಿಪೊ ಮ್ಯಾನೇಜರ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಪೊಲೀಸರು ಕೂಡ ದೌಡಾಯಿಸಿ ಕಂಟ್ರೋಲರ್ ಅವರೊಂದಿಗೆ ಮಾತುಕತೆ ನಡೆಸಿದರು. ಸ್ಥಳಕ್ಕೆ ಡಿಪೊ ಮ್ಯಾನೇಜರ್ ಬಂದು ನಮಗೆ ಬಸ್ ಬಿಡುವುದಾಗಿ ಲಿಖಿತ ರೂಪದಲ್ಲಿ ಭರವಸೆ ಕೊಡಬೇಕು. ಅಲ್ಲಿಯವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದು ಕುಳಿತ ಪ್ರಸಂಗ ನಡೆಯಿತು.