ಕಂಡಕ್ಟರ್ ಮೇಲೆ ಗೂಂಡಾಗಿರಿ ಮಾಡಿದ ನಾಡದ್ರೋಹಿಗಳಿಗೆ ಕನ್ನಡಿಗರ ಕಿಚ್ಚಿನ ಬಿಸಿ ಮುಟ್ಟಿದೆ. ಎಂಇಎಸ್, ಶಿವಸೇನೆ ವಿರುದ್ಧ ಕರವೇ ರಾಜ್ಯಾಧ್ಯಕ್ಷರಾದ ನಾರಾಯಣಗೌಡ, ಪ್ರವೀಣ ಶೆಟ್ಟಿ ಬೆಳಗಾವಿ ನೆಲದಲ್ಲಿ ನಿಂತುಕೊಂಡು ಗುಡುಗಿದ್ದಾರೆ. ಕನ್ನಡಿಗರು ಸಿಡಿದ್ದೆದ್ದ ಪರಿಣಾಮ ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸ್ ಬಾಲಕಿ ವಾಪಸ್ ಪಡೆದುಕೊಂಡಿದ್ದು, ನಾವು ಕನ್ನಡದ ಅಭಿಮಾನಿಗಳು ಅಂತಾ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕನ್ನಡಿಗರ ತಂಟೆಗೆ ಬಂದ್ರೆ ಹುಷಾರ್ ಅಂತಾ ಬೆಳಗಾವಿಯಲ್ಲಿ ಕನ್ನಡದ ಕಟ್ಟಾಳುಗಳ ಘರ್ಜಿಸಿದ್ದಾರೆ.
ಹೌದು… ಕುಂದಾನಗರಿ ಬೆಳಗಾವಿಯಲ್ಲಿ ಇಂದು ಕನ್ನಡ ಕಟ್ಟಾಳುಗಳು ನಾಡದ್ರೋಹಿಗಳ ವಿರುದ್ಧ ಘರ್ಜಿಸಿದ್ರು. ಕಂಡಕ್ಟರ್ ಮೇಲೆ ಎಂಇಎಸ್ ಗೂಂಡಾವರ್ತನೆ ಮತ್ತು ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗೆ ಮಸಿ ಬಳಿದ ಶಿವಸೇನೆ ಗೂಂಡಾಗಿರಿಗೆ ಬೆಳಗಾವಿ ನೆಲದಲ್ಲಿ ನಿಂತುಕೊಂಡು ಎಚ್ಚರಿಕೆ ಕೊಟ್ಟಿದ್ದಾರೆ. ಇಂದು ಬೆಳಗಾವಿಯಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಮತ್ತು ಕರವೇ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತ್ಯೇಕವಾಗಿಯೇ ಶಕ್ತಿಪ್ರದರ್ಶನ ಮಾಡಿದ್ರು.
YouTube Ad Block: ಜಾಹೀರಾತು ಇಲ್ಲದೆಯೂ ಯೂಟ್ಯೂಬ್ʼನಲ್ಲಿ ವಿಡಿಯೋ ನೋಡ್ಬಹುದು! ಹೇಗೆ ಗೊತ್ತಾ..?
ಬೆಳಗಾವಿ ಟು ಬಾಳೇಕುಂದ್ರಿ ಚಲೋ ಕರೆಕೊಟ್ಟಿದ್ದ ಪ್ರವೀಣ ಶೆಟ್ಟಿ ನೇತೃತ್ವದ ಕಾರ್ಯಕರ್ತರನ್ನ ಪೊಲೀಸರು ಚೆನ್ನಮ್ಮ ವೃತ್ತದಲ್ಲೇ ತಡೆದ್ರು.ಈ ಸಂದರ್ಭದಲ್ಲಿ ಪೊಲೀಸರು ಹೋರಾಟಗಾರರ ಮಧ್ಯೆ ಜಟಾಪಟಿ ನಡೆಯಿತು. ಪ್ರವೀಣ ಶೆಟ್ಟಿ ಸೇರಿ ನೂರಕ್ಕೂ ಅಧಿಕ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದುಕೊಂಡ್ರು. ಒಂದು ಕ್ಷಣದಲ್ಲಿ ಚೆನ್ನಮ್ಮ ವೃತ್ತದಲ್ಲಿ ಹೋರಾಟದ ಕಿಚ್ಚು ರಣರಂಗವಾಗಿ ಮಾರ್ಪಟ್ಟಿತು. ಅನಂತರ ಕರವೇ ಕಾರ್ಯಕರ್ತರು ನಾರಾಯಣಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ್ರು.
ಕೈಯಲ್ಲಿ ಕನ್ನಡದ ಬಾವುಟ ಹಿಡಿದು ನಾಡದ್ರೋಹಿಗಳ ವಿರುದ್ಧ ಘೋಷಣೆ ಹಾಕಿದ್ರು. ಇದೇ ಸಂದರ್ಭದಲ್ಲಿ ಚೆನ್ನಮ್ಮ ಮೂರ್ತಿ ಮಾಲಾರ್ಪಣೆ ಮಾಡಿ ಘರ್ಜಿಸಿದ ನಾರಾಯಣಗೌಡ್ರು, ಬೆಳಗಾವಿಯಲ್ಲಿ ಕನ್ನಡಿಗರ ತಂಟೆಗೆ ಬಂದ್ರೆ ಹುಷಾರ್. ಅಧಿಕಾರಿಗಳು ಕನ್ನಡಿಗರ ಹಿತ ಕಾಪಾಡಬೇಕು. ಎಂಇಎಸ್ ಪುಂಡರನ್ನ ಗೂಂಡಾ ಕಾಯ್ದೆಯಡಿ ಬಂಧಿಸಬೇಕೆಂದು ಒತ್ತಾಯಿಸಿದ್ರು. ಅಲ್ಲದೇ ಪೋಕ್ಸೋ ಕೇಸ್ ದಾಖಲಿಸಿದ ಇನ್ಸ್ಪೆಕ್ಟರ್ ಅಮಾನತು ಮಾಡುವಂತೆ ಕರವೇ ಒತ್ತಾಯಿಸಿದೆ. ಈ ಮಧ್ಯೆ ಶಿವಸೇನೆ ಪುಂಡಾಟವನ್ನ ಪಾಕಿಸ್ತಾನದ ಭಯೋತ್ಪಾದಕರಂತಿದೆ ಅಂತಾ ನಾರಾಯಣಗೌಡ ಕಿಡಿಕಾರಿದ್ದಾರೆ.
ಇನ್ನೂ ಕರವೇ ಪ್ರತಿಭಟನೆಗೂ ಮುನ್ನವೇ ಕಂಡಕ್ಟರ್ ಮೇಲೆ ಪೋಕ್ಸೋ ಪ್ರಕರಣದ ಕುರಿತು ಪೊಲೀಸ್ ಆಯುಕ್ತರಿಗೆ ಬಿ ರಿಪೋರ್ಟ್ ಸಲ್ಲಿಕೆ ಆಗಿದೆ. ಅಲ್ಲದೇ ಮಾರಿಹಾಳ ಠಾಣೆ ಇನ್ಸ್ಪೆಕ್ಟರ್ ಗುರುರಾಜ ಕಲ್ಯಾಣಶೆಟ್ಟಿಯನ್ನ ವರ್ಗಾವಣೆ ಮಾಡಲಾಗಿದೆ. ಕನ್ನಡ ಹೋರಾಟಗಾರ ಆಕ್ರೋಶ ಕಿಚ್ಚಿಗೆ ಮಣಿದ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ಅಮಾಯಕ ಕಂಡಕ್ಟರ್ ಮಹಾದೇವ ಹುಕ್ಕೇರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಕನ್ನಡಿಗರ ಮೇಲೆ ಯಾವುದೇ ಹಲ್ಲೆಗೂ ಅವಕಾಶ ಕೊಡುವುದಿಲ್ಲ.
ಕಂಡಕ್ಟರ್ ಮೇಲೆ ಗೂಂಡಾಗಿರಿ ಮಾಡಿದ ಐದು ಜನ ಆರೋಪಿಗಳನ್ನ ಅರೇಸ್ಟ್ ಮಾಡಿದ್ದೇವೆ. ಬಾಲಕಿ ಕೇಸ್ ವಾಪಸ್ ಪಡೆದಿದ್ದರಿಂದ ಅದನ್ನ ಕ್ಲೀಯರ್ ಮಾಡ್ತಿವಿ ಭರವಸೆ ನೀಡಿದ್ದರಿಂದ ಕರವೇ ಹೋರಾಟ ಉಗ್ರಸ್ವರೂಪ ಪಡೆಯದಂತೆ ಬೆಳಗಾವಿ ಪೊಲೀಸರು ಜಾಣ್ಮೆಯಿಂದ ತಡೆದಿದ್ದಾರೆ. ಈ ಮಧ್ಯೆ ಎರಡು ದಿನಗಳಿಂದ ಕರ್ನಾಟಕ ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಇಂದು ಬೆಳಗಾವಿ ಡಿಸಿ ಕೊಲ್ಲಾಪುರ ಡಿಸಿ ಮತ್ತು ಬೆಳಗಾವಿ ಎಸ್ಪಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ರು.
ಎರಡು ರಾಜ್ಯಗಳ ಮಧ್ಯೆ ಸುಗಮ ಬಸ್ ಸಂಚಾರಕ್ಕೆ ಹಾಗೂ ಎರಡು ರಾಜ್ಯದ ಗಡಿಯಲ್ಲಿ ಸುರಕ್ಷಿತವಾಗಿ ಪ್ರಯಾಣಕ್ಕೆ ಬೇಕಾದ ಮಾರ್ಗ ಸೂಚಿಗಳನ್ನ ಸಿದ್ಧ ಪಡೆಸಲು ತೀರ್ಮಾನ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಮಧ್ಯೆ ಬಸ್ ಸಂಚಾರ ಮಾರ್ಗಸೂಚಿ ಪ್ರಕಟವಾಗಲಿದೆ. ಈ ಮಧ್ಯೆ ಬೆಳಗಾವಿಯಲ್ಲಿ ಕನ್ನಡಿಗರ ಸುರಕ್ಷಿತವಾಗಿ ಪೊಲೀಸ್ ಇಲಾಖೆ ಕ್ರಮವಹಿಸಲಿದೆ. ಗೂಂಡಾಗಿರಿ ಮಾಡುವವರನ್ನ ಸಹಿಸುವುದಿಲ್ಲ ಅಂತಾ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಹೇಳಿದ್ದಾರೆ.
ಒಟ್ಟಿನಲ್ಲಿ ಹೋರಾಟಕ್ಕೂ ಮುನ್ನವೇ ಕಂಡಕ್ಟರ್ ಮೇಲಿನ ಸುಳ್ಳು ಕೇಸ್ ವಾಪಸ್ ಪಡೆದುಕೊಂಡಿದ್ದಾಳೆ ಬಾಲಕಿ. ಈ ಮಧ್ಯೆ ನಾಡದ್ರೋಹಿ ಎಂಇಎಸ್, ಶಿವಸೇನೆ ಪುಂಡರಿಗೆ ಬೆಳಗಾವಿ ನೆಲದಲ್ಲೇ ನಿಂತುಕೊಂಡು ಕನ್ನಡ ಹೋರಾಟಗಾರರು ನಮ್ಮ ತಂಟೆಗೆ ಬಂದ್ರೆ ಹುಷಾರ್ ಅಂತಾ ಎಚ್ಚರಿಕೆ ಕೊಟ್ಟಿದ್ದಾರೆ.