ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಶಬರಿಮಲೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸಂಚರಿಸುತ್ತಿದ್ದ ಬಸ್ ಪಲ್ಟಿಯಾಗಿ 15 ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಗುಡ್ಡೆತೋಟದ ಬಳಿ ನಡೆದಿದೆ. ಮೈಸೂರು ಮೂಲದ ಬಸ್ಸಿನಲ್ಲಿ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಮಾಡಿ ಬಂದಿದ್ದ ಮಾಲಾಧಾರಿಗಳು, ಶೃಂಗೇರಿ ಶಾರದಾಂಬೆ ದರ್ಶನ ಪಡೆದು ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಹೊರಟಿದ್ದರು.
ಬಸ್ ಜಯಪುರದಿಂದ ಗುಡ್ಡೆತೋಟದ ಮೂಲಕ ಹೊರನಾಡಿಗೆ ಹೋಗುವಾಗ ರಸ್ತೆ ತಿರುವಿನಲ್ಲಿ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿಯೋ ಅಥವಾ ಸ್ಟೇರಿಂಗ್ ಕಟ್ ಆಗಿ ಅಪಘಾತವಾಗಿಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ತಿರುವಿನಲ್ಲಿ ಬಸ್ ಪಲ್ಟಿಯಾಗಿ ಬಿದ್ದಿದೆ. ಬಸ್ಸಿನಲ್ಲಿ 34 ಜನ ಮಾಲಾಧಾರಿಗಳು ಪ್ರಯಾಣ ಮಾಡುತ್ತಿದ್ದರು. ಅವರಲ್ಲಿ 15 ಜನರಿಗೆ ಗಾಯವಾಗಿದೆ. ಗಾಯಾಳುಗಳನ್ನ ಶೃಂಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದಕ್ಕಿಂತ ಒಳ್ಳೆ ಸೇವಿಂಗ್ಸ್ ಮತ್ತೊಂದಿಲ್ಲ..! ದಿನಕ್ಕೆ 50 ರೂಪಾಯಿ ಉಳಿಸಿ 30 ಲಕ್ಷ ನಿಮ್ಮದಾಗಿಸಿಕೊಳ್ಳಿ.!
ತಿರುವಿನಲ್ಲಿ ಬಸ್ ಪಲ್ಟಿಯಾದ ಕಾರಣ ಕೆಲ ಹೊತ್ತು ಟ್ರಾಫಿಕ್ ಜಾಮ್ ಕೂಡ ಆಗಿತ್ತು. ಸ್ಥಳೀಯರು ಹಗ್ಗ ಕಟ್ಟಿ ಬಿದ್ದಿದ್ದ ಬಸ್ಸನ್ನ ಎಳೆಯಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಆಗಮಿಸಿದ ಜಯಪುರ ಪೊಲೀಸರು ಕ್ರೇನ್ ಮೂಲಕ ಬಿದ್ದಿದ್ದ ಬಸ್ಸನ್ನ ಪಕ್ಕಕ್ಕೆ ಎಳೆದು ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.