ಬೆಂಗಳೂರು: ಕೇವಲ 10 ದಿನಗಳ ಹಿಂದೆಯಷ್ಟೇ ಆ ಭಾಗದ ರೈತರು (Farmers) ತಾವೇ ಬೆಳೆದಿದ್ದ ಹೂಗಳನ್ನ ತಿಪ್ಪೆಗೆ ಬಿಸಾಡುತ್ತಿದ್ರು. ಕಾರಣ ಪಿತೃಪಕ್ಷ ಅಂತ, ಆಗ ಹೂಗಳನ್ನೇ ಖರೀದಿ ಮಾಡೋರೆ ಇರಲಿಲ್ಲ. ಆದರೀಗ ನವರಾತ್ರಿ ದಸರಾ ಹಬ್ಬ ಆ ರೈತರಿಗೆ ಪಾಲಿಗೆ ಬಂಪರ್ ಲಾಭ ತಂದಿದೆ. ತಿಪ್ಪೆಗೆ ಬಿಸಾಡುತ್ತಿದ್ದ ಹೂಗಳಿಗೆ ಚಿನ್ನದ ಬೆಲೆ ಬಂದಿದ್ದು, ಇತಿಹಾಸದಲ್ಲೇ ಕಂಡು ಕೇಳರಿಯದ ಬೆಲೆಗೆ ಗುಲಾಬಿ ಹೂ (Rose Flower) ಮಾರಾಟವಾಗಿದೆ. ಇದರಿಂದ ರೈತರು ಫುಲ್ ಖುಷ್ ಆಗಿದ್ದಾರೆ.
ಹೂವು ಖರೀದಿ ಮಾಡುವವರೇ ಇಲ್ಲದೇ ರಾಶಿ-ರಾಶಿ ಹೂ ತಿಪ್ಪೆಗೆ ಬಿಸಾಡಿರೋದು ಒಂದು ಕಡೆಯಾದ್ರೆ, ಅದೇ ಹೂವಿಗೆ ಇತಿಹಾಸದಲ್ಲೇ ಕಂಡು ಕೇಳರಿಯದ ಬೆಲೆ ಬಂದಿರೋದು ಚಿಕ್ಕಬಳ್ಳಾಪುರದಲ್ಲಿ (Chikkaballapura(. ಕೇವಲ 10 ದಿನಗಳ ಹಿಂದೆ ರೈತರು ಮಾರುಕಟ್ಟೆಗೆ ಹೂ ತಂದ್ರೂ ಕೇಳೋರೆ ಇರಲಿಲ್ಲ. ಹೀಗಾಗಿ ತಂದಿದ್ದ ಹೂವನ್ನೇ ಮಾರುಕಟ್ಟೆಯಲ್ಲೇ ತಿಪ್ಪೆಗೆ ಬಿಸಾಡಿ ಹೋಗಿದ್ರು.
ಇದೀಗ ದಸರಾ ಹಬ್ಬದ ಅಂಗವಾಗಿ ಹೂಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇದ್ರಿಂದ ಹೂಗಳ ಬೆಲೆ ಗಗನಕ್ಕೇರಿದ್ದು ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಲ್ಲಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 1 ಕೆಜಿ ಗುಲಾಬಿ ಹೂವಿನ ಬೆಲೆ 400 ರಿಂದ 500 ರೂ. ವರೆಗೂ ಮಾರಾಟವಾಗಿದೆ. ಇನ್ನೂ ತರಹೇವಾರಿ ಸೇವಂತಿಗೆ ಹೂಗಳು ಕೆಜಿಗೆ 250 ರಿಂದ 350 ರೂಪಾಯಿಯವರೆಗೂ ಮಾರಾಟವಾಗುತ್ತಿವೆ. ಅದ್ರಲ್ಲೂ ಕೆಜಿ ಕನಕಾಂಬರ 1,000 ರೂಪಾಯಿಯಿಂದ 1,200 ರೂ. ವರೆಗೆ ಮಾರಾಟವಾಗುತ್ತಿದ್ರೆ ಮಲ್ಲಿಗೆ ಹೂ 1 ಕೆಜಿಗೆ 1,000 ರೂಪಾಯಿಯಾಗಿದೆ. ಇದ್ರಿಂದ ಹೂ ಬೆಳೆದ ರೈತರಿಗೆ ಸಂತಸವೋ ಸಂತಸ ಎಂಬಂತಾಗಿದೆ