ಮೈಸೂರು:- ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಕೂಡ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿದರು.
ತಮ್ಮ ಅಳಿಯನಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಪ್ರಸಾದ್ ಪಕ್ಷದ ಮೇಲೆ ಮುನಿಸಿಕೊಂಡಿದ್ದಾರೆ. ಹೀಗಾಗಿ BSY ಅವರು ಮುನಿಸನ್ನು ಶಮನ ಮಾಡಲು ಯತ್ನಿಸಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಮೈಸೂರಿನಲ್ಲಿ ನಡೆಯುವ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬರಲು ಶ್ರೀನಿವಾಸ್ ಪ್ರಸಾದ್ ಒಪ್ಪಿದ್ದಾರೆ. ಶ್ರೀನಿವಾಸ್ ಪ್ರಸಾದ್ ಬಹಳ ಹಿರಿಯ ಸಂಸತ್ ಸದಸ್ಯರು. ಮೋದಿ ಅವರ ಬಗ್ಗೆ ಬಹಳ ಗೌರವ ಇಟ್ಟುಕೊಂಡಿದ್ದಾರೆ. ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ 5 ನಿಮಿಷ ಇದ್ದು ಹೋಗಿ ಅಂತ ಮನವಿ ಮಾಡಿಕೊಂಡಿದ್ದೇನೆ. ಶ್ರೀನಿವಾಸ್ ಪ್ರಸಾದ್ ಅವರು ಬರಲು ಒಪ್ಪಿಕೊಂಡಿದ್ದಾರೆ. ಇದಕ್ಕೆ ಚಿರ ಋಣಿಯಾಗಿದ್ದೇನೆ ಎಂದರು.
ಬಳಿಕ ಪ್ರಸಾದ್ ಮಾತನಾಡಿ, ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಬರುವಂತೆ ಬಿಎಸ್ ಯಡಿಯೂರಪ್ಪ ಆಹ್ವಾನಿಸಿದ್ದಾರೆ. ಖಡಾ ಖಂಡಿತವಾಗಿ ಬರಲು ಆಗಲ್ಲ ಅಂತ ಹೇಳಲು ಆಗಲ್ಲ. ಮನೆಗೆ ಬಂದವರನ್ನು ಸೌಜನ್ಯದಿಂದ ಸ್ವಾಗತಿಸುವುದು ಕರ್ತವ್ಯ. ಸೌಜನ್ಯದಿಂದ ಬಂದಾಗ ಪ್ರೀತಿಯಿಂದ ಮಾತನಾಡಿದ್ದೇನೆ. ಕಾರ್ಯಕ್ರಮಕ್ಕೆ ಹೋಗುವುದು ಬಿಡುವುದು ನಮ್ಮ ತೀರ್ಮಾನ ಎಂದು ಹೇಳಿದ್ದಾರೆ.