ವೆಸ್ಟ್ ಇಂಡೀಸ್ ಲೆಜೆಂಡ್ ಡ್ವೇನ್ ಬ್ರಾವೋ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್)ನಲ್ಲಿ ಗಾಯದಿಂದಾಗಿ ಆಟದಿಂದ ದೂರವಿದ್ದರು. ಈಗ ನಿವೃತ್ತಿ ಘೋಷಿಸಿದ್ದಾರೆ.
ಮುಂದಿನ ತಿಂಗಳು 41ನೇ ವರ್ಷಕ್ಕೆ ಕಾಲಿಡಲಿರುವ ಬ್ರಾವೋ, ಟಿ20 ಮಾದರಿಯಲ್ಲಿ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ. ಬ್ರಾವೋ 2021 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದರು. ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಮ್ಮ ಆಟವನ್ನು ಕೊನೆಗೊಳಿಸಲು ನಿರ್ಧರಿಸಿದ್ದರು.
ಕಳೆದ ವರ್ಷದಿಂದ ಬ್ರಾವೋ ಅವರು ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಅಫ್ಘಾನಿಸ್ತಾನಕ್ಕಾಗಿ ಕೋಚಿಂಗ್ ಕಡೆಗೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ವಿದಾಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಬ್ರಾವೋ, ನನಗೆ ಎಲ್ಲವನ್ನೂ ನೀಡಿದ ಆಟಕ್ಕೆ ಇಂದು ನಾನು ವಿದಾಯ ಹೇಳುವ ದಿನ. ಐದನೇ ವಯಸ್ಸಿನಿಂದ ನಾನು ಕ್ರಿಕೆಟ್ ಆಟದ ಕಡೆ ಆಸಕ್ತಿ ಹೊಂದಿದ್ದೆ. ಇದು ನಾನು ಆಡಲು ಉದ್ದೇಶಿಸಲಾದ ಕ್ರೀಡೆಯಾಗಿದೆ. ನನಗೆ ಯಾವುದರಲ್ಲೂ ಆಸಕ್ತಿ ಇರಲಿಲ್ಲ. ನಾನು ನನ್ನ ಸಂಪೂರ್ಣ ಜೀವನವನ್ನು ನಿಮಗೆ ಅರ್ಪಿಸಿದ್ದೇನೆ. ನಾನು ಮತ್ತು ಕುಟುಂಬಕ್ಕಾಗಿ ಕಂಡ ಕನಸನ್ನು ನೀವು ಈಡೇರಿಸಿದ್ದೀರಿ. ನಾನು ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲುದು ಎಂದು ಭಾವನಾತ್ಮಕವಾಗಿ ಪೋಸ್ಟ್ ಹಾಕಿದ್ದಾರೆ.
CPL ನಲ್ಲಿ, ಬ್ರಾವೋ 107 ಪಂದ್ಯಗಳನ್ನು ಆಡಿದ್ದು, 20.62 ರ ಸರಾಸರಿಯಲ್ಲಿ ಮತ್ತು 129.33 ರ ಸ್ಟ್ರೈಕ್ ರೇಟ್ನಲ್ಲಿ 1,155 ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲಿ ಅವರು 23.02 ಸರಾಸರಿಯಲ್ಲಿ 129 ವಿಕೆಟ್ಗಳನ್ನು ಕಿತ್ತಿದ್ದಾರೆ.