ಬೆಂಗಳೂರು: ಕರ್ನಾಟಕ ಮೈಕ್ರೋ ಫೈನಾನ್ಸ್ (ಬಲವಂತ ಕ್ರಮಗಳ ನಿಯಂತ್ರಣ) ಸುಗ್ರೀವಾಜ್ಞೆ – 2025′ ಕರಡು ಪ್ರತಿ ರಾಜ್ಯಪಾಲರಿಗೆ ರವಾನೆ ಮಾಡಲಾಗಿತ್ತು. ರಾಜಭವನಕ್ಕೆ ಸಿಎಂ ಕಚೇರಿ ಸಿಬ್ಬಂದಿ ಕಡತ ಸಲ್ಲಿಸಿದ್ದರು. ಸಿಎಂ ಅನುಮೋದನೆ ಮಾಡಿದ ಬಳಿಕ ರಾಜ್ಯಪಾಲರಿಗೆ ರವಾನೆ ಮಾಡಲಾಗಿತ್ತು. ಆದರೆ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ತಿರಸ್ಕಾರ ಮಾಡಿದ್ದರು. ಆದ್ರೆ ಇದೀಗ ಕರ್ನಾಟದಲ್ಲಿ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಹಲವು ಸಲಹೆಗಳನ್ನು ನೀಡಿ ಅನುಮೋದಿಸಲಾಗಿದೆ. ಸಲಹೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.
3 ಎಚ್ಚರಿಕೆ (ನಿಬಂಧನೆ) ಒಳಪಟ್ಟು ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದ ರಾಜ್ಯಪಾಲರು
# ಆರ್ ಬಿಐ ಅಡಿ ನೋಂದಾಯಿತ,ಸಹಕಾರಿ,ಸಣ್ಣ ಹಣಕಾಸು ಸಂಸ್ಥೆಗಳಿಗೆ ವ್ಯಾಪಾರ ವ್ಯವಹಾರಕ್ಕೆ ಯಾವುದೇ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು.
#ಈಗಾಗಲೇ ಸಾಲ ನೀಡಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿದಾತರು ಈ ಸುಗ್ರೀವಾಜ್ಞೆಯಿಂದ ಅವರ ಸಾಲ,ಹಾಗೂ ಬಡ್ಡಿ ವಸೂಲಾತಿಗೆ ಅಡ್ಡಿಯಾಗಬಹುದು ಮತ್ತು ಕಾನೂನು ಹೋರಾಟಕ್ಕೆ ಆಸ್ಪದ ಕಲ್ಪಿಸಬಹುದು
# ಸಂವಿಧಾನದ ಕಲಂ ೧೯ ಮತ್ತು ೩೨ ಅಡಿ ನೈಸರ್ಗಿಕ ನ್ಯಾಯ ಪಡೆಯಲು (Natural Justice) ಅವಕಾಶವಿದೆ.ಹೀಗಾಗಿ ಅವರ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸಿ
ಈ ಮೂರು ನಿಬಂಧನೆಗಳಿಗೆ ಒಳಪಟ್ಟು ಸುಗ್ರೀವಾಜ್ಞೆ ಅನುಮೋದನೆ ನೀಡಲಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವಂತೆ ಸೂಚನೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಜ್ಯಪಾಲರ ಅನುಮೋದನೆಗಾಗಿ ಮೈಕ್ರೋ ಸುಗ್ರೀವಾಜ್ಞೆಯನ್ನು ಕಳುಹಿಸಿತ್ತು. ಆದರೆ ರಾಜ್ಯಪಾಲರು ಕೆಲ ಸ್ಪಷ್ಟನೆ ಕೇಳಿ ಸರ್ಕಾರಕ್ಕೆ ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿದ್ದರು. ಇದಾದ ನಂತರ ರಾಜ್ಯ ಸರ್ಕಾರ ಮತ್ತೊಮ್ಮೆ ರಾಜ್ಯಪಾಲರಿಗೆ ಸುಗ್ರೀವಾಜ್ಞೆಯನ್ನು ಕಳುಹಿಸಿದ್ದು ಇಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅಂತಿಮವಾಗಿ ಸುಗ್ರೀವಾಜ್ಞೆಗೆ ಸಹಿ ಹಾಕಿ ಅನುಮೋದನೆ ನೀಡಿದ್ದಾರೆ.