ಚಿತ್ರದುರ್ಗ: ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಹಿರಿಯೂರು ನಗರದ ಐತಿಹಾಸಿಕ ಶ್ರೀತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಸಂಪನ್ನಗೊಂಡಿತು. ತಾಲೂಕಿನ ಬೀರೇನಹಳ್ಳಿ ಮಜುರೆ ಕರಿಯಣ್ಣನಹಟ್ಟಿ ಗ್ರಾಮದ ವೀರಕರಿಯಣ್ಣ ದೇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ನಂತರ ದೇವಸ್ಥಾನದಲ್ಲಿದ್ದ ಶಿವಧನಸ್ಸನ್ನು ಹೊರತೆಗೆದು ಸಮೀಪದ ವೇದಾವತಿ ನದಿಗೆ ತೆಗೆದುಕೊಂಡು ಹೋಗಿ, ಅಭಿಷೇಕ ಮಾಡಿ ದೇವಾಲಯಕ್ಕೆ ತರಲಾಯಿತು. ಅನಂತರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಲ್ಲಿಗೆ, ಕಾಕಡಾ, ಕನಕಾಂಬರ, ಸೇವಂತಿಗೆ ಸೇರಿದಂತೆ ವಿವಿಧ ರೀತೀಯ ಹೂವುಗಳು ಹಾಗೂ ಬಣ್ಣಬಣ್ಣದ ಅಂಲಕೃತವಾದ ಬಟ್ಟೆಗಳಿಂದ ಸಿಂಗರಿಸಿ ಅಲಂಕಾರಗೊಂಡ ಬ್ರಹ್ಮರಥದಲ್ಲಿ ದೇವರನ್ನು ಕೂರಿಸಿದ ಬಳಿಕ ಪೂಜೆ ಸಲ್ಲಿಸಲಾಯಿತು.
ನಂತರ ಭಕ್ತರ ಸಮ್ಮುಖದಲ್ಲಿ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆ ನಡೆಯಿತು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ದೇವರಿಗೆ ಪೂಜೆ ಸಲ್ಲಿಸಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ವಾದ್ಯಗಳು ಹಾಗೂ ಸಾವಿರಾರು ಭಕ್ತರ ಘೋಷಣೆಗಳೊಂದಿಗೆ ಬ್ರಹ್ಮರಥೋತ್ಸವವು ವಾಸವಿ ರಸ್ತೆಯ ಮೂಲಕ ಸಿದ್ದನಾಯಕ ಸರ್ಕಲ್ವರೆಗೂ ಸಂಚರಿಸಿತು. ಬ್ರಹ್ಮರಥೋತ್ಸವ ನಂತರ ಸಂಜೆ ವೇಳೆ ಚಂದ್ರಮೌಳೇಶ್ವರ ಹಾಗೂ ಉಮಾಮಹೇಶ್ವರ ಸ್ವಾಮಿ ರಥೋತ್ಸವ ನಡೆಯಿತು.
26.50ಲಕ್ಷಕ್ಕೆ ಮುಕ್ತಿಬಾವುಟ
ಜಿಲ್ಲಾಧಿಕಾರಿ ಅನುಮತಿ ಮೇರೆಗೆ ಸತತ 8ನೇ ಬಾರಿಗೆ ಬ್ರಹ್ಮರಥೋತ್ಸಕ್ಕೆ ಚಾಲನೆ ನೀಡುವ ಮೊದಲು ನಡೆಯುವ ಮುಕ್ತಿ ಭಾವುಟ ಹರಾಜು ಜನರಲ್ಲಿ ಕುತೂಹಲ ಕೆರಳಿಸಿತು. ಒಂದು ಲಕ್ಷಕ್ಕೆ ಜಗದೀಶ್ ಭಂಡಾರಿ ಅವರಿಂದ ಆರಂಭವಾದ ಹರಾಜು ಪ್ರಕ್ರಿಯೆಯು ಹಂತಹತವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೇ ನೇರ ಪೈಪೋಟಿ ಏರ್ಪಟ್ಟಿತ್ತು, ಅಂತಿಮವಾಗಿ ರೂ 26.50ಲಕ್ಷಗಳಿಗೆ ಕೂಗುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪಾಲಾಯಿತು.
ದಾರಿಯುದ್ದಕ್ಕೂ ಬಾಳೆಹಣ್ಣುಗಳ ಎಸೆತ
ದೇವರನ್ನು ರಥೋತ್ಸವದಲ್ಲಿ ಕೂರಿಸಿ ಪೂಜೆ ಸಲ್ಲಿಸಿದ ನಂತರ ಭಕ್ತರು ತಮ್ಮ ಇಷ್ಟಾರ್ಥಗಳು ನೇರವೇರಿಸಲು ಹರಕೆಯಂತೆ ತಂದಿದ್ದ ಬಾಳೆಹಣ್ಣುಗಳನ್ನು ರಥಕ್ಕೆ ತೂರುತ್ತಿದ್ದ ದೃಶ್ಯ ಕಂಡುಬಂದಿತು.