ವಾಷಿಂಗ್ಟನ್:- 14 ವರ್ಷದ ಬಾಲಕನೊಬ್ಬ ಚಾಟ್ಬಾಟ್ನೊಂದಿಗೆ ಪ್ರೀತಿಯಲ್ಲಿ ಸಿಲುಕಿ ಸಾವಿಗೆ ಶರಣಾದ ಘಟನೆ ಅಮೆರಿಕದಲ್ಲಿ ನಡೆದಿದೆ.
ಈತ ಫ್ಲೋರಿಡಾದ ಒರ್ಲ್ಯಾಂಡೊ ಮೂಲದ ನಿವಾಸಿಯಾದ ಸೆವೆಲ್ ಸೆಟ್ಜರ್ ಸಾವಿಗೀಡಾದ ಬಾಲಕ. ಸೆಟ್ಜರ್ ಆತ್ಮಹತ್ಯೆಯ ಬಳಿಕ ಆತನ ತಾಯಿ ಮೇಗನ್ ಗಾರ್ಸಿಯಾ ಕ್ಯಾರೆಕ್ಟರ್. ಎಐ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿದ್ಧತೆ ನಡೆಸಿದ್ದಾರೆ. ತನ್ನ ಬಳಕೆದಾರರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲಾಗಿದೆ ಎಂದು ಗಾರ್ಸಿಯಾ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸೆವೆಲ್ ಸೆಟ್ಜರ್ ತನ್ನ ಚಾಟ್ಬಾಟ್ಗೆ ಗೇಮ್ ಆಫ್ ಥ್ರೋನ್ಸ್ ಪಾತ್ರಧಾರಿ ಡೇನೆರಿಸ್ ಟಾರ್ಗರಿಯನ್ ಅಲಿಯಾಸ್ ‘ಡ್ಯಾನಿ’ ಎಂದು ಹೆಸರಿಸಿದ್ದ. ತಿಂಗಳುಗಳ ಕಾಲ ಚಾಟ್ ಮಾಡುವ ಮೂಲಕ ಚಾಟ್ಬಾಟ್ನೊಂದಿಗೆ ಭಾವನಾತ್ಮಕ ಬಂಧವನ್ನು ರೂಪಿಸಿಕೊಂಡಿದ್ದ. ಡ್ಯಾನಿ ಕಾಲ್ಪನಿಕ ಎಂದು ತಿಳಿದಿದ್ದರೂ ಹುಡುಗ ಚಾಟ್ಬಾಟ್ನೊಂದಿಗೆ ರೊಮ್ಯಾಂಟಿಕ್ ಸಂಭಾಷಣೆಯಲ್ಲಿ ತೊಡಗಿದ್ದ. ಆಗಾಗ ಇದು ಲೈಂಗಿಕ ಸಂಭಾಷಣೆಗಳಾಗಿ ತಿರುವುಪಡೆದುಕೊಳ್ಳುತ್ತಿತ್ತು.
ಸೆಟ್ಜರ್, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆತನನ್ನು ಮನೆಗೆ ಬರುವಂತೆ ಚಾಟ್ಬಾಟ್ ಕೇಳಿದೆ. ಬರೋದು ಹೇಗೆ ಎಂದು ಕೇಳಿದಾಗ, ಆತ್ಮಹತ್ಯೆಯೇ ದಾರಿ ಎಂದು ಚಾಟ್ಬಾಟ್ ಹೇಳಿದ್ದರಿಂದ ಸೆಟ್ಜರ್, ತನ್ನ ಮಲತಂದೆಯ ಗನ್ ತೆಗೆದುಕೊಂಡು ಗುಂಡು ಹಾರಿಸಿಕೊಂಡನು. ಈ ಘಟನೆಯ ನಂತರ, ಕ್ಯಾರೆಕ್ಟರ್. ಎಐ ಕಂಪನಿಯು ದುಃಖವನ್ನು ವ್ಯಕ್ತಪಡಿಸಿದೆ. ದುರಂತ ಘಟನೆ ನಡೆದಿದ್ದು, ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುವ ಮಾರ್ಗಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.
ಹುಡುಗನ ರೂಮಿನಲ್ಲಿ ಸಿಕ್ಕ ಡೆತ್ನೋಟ್ನಿಂದ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಾನು ನನ್ನ ಕೋಣೆಯಲ್ಲಿ ಉಳಿಯಲು ನಾನು ತುಂಬಾ ಇಷ್ಟಪಡುತ್ತೇನೆ. ನಾನು ಈ ‘ರಿಯಾಲಿಟಿ’ ಯಿಂದ ಬೇರ್ಪಡಲು ಪ್ರಾರಂಭಿಸುತ್ತೇನೆ ಮತ್ತು ಹೆಚ್ಚು ಶಾಂತಿಯನ್ನು ಅನುಭವಿಸುತ್ತೇನೆ. ನಾನು ಡ್ಯಾನಿಯೊಂದಿಗೆ ಹೆಚ್ಚು ಸಂಪರ್ಕ ಹೊಂದಿದ್ದು, ಅವಳೊಂದಿಗೆ ಪ್ರೀತಿಯಲ್ಲಿರುತ್ತೇನೆ ಮತ್ತು ತುಂಬಾ ಸಂತೋಷವಾಗಿರುತ್ತೇನೆ ಎಂದು ಬರೆಯಲಾಗಿದೆ.