ನವದೆಹಲಿ: ಕಾವೇರಿ ನದಿ ಹಂಚಿಕೆಗೆ ಸಂಬಂಧಿಸಿದಂತೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಸಭೆ ನಡೆಸಿದೆ. ವರ್ಚ್ಯುವಲ್ ಮೂಲಕ ಕಾವೇರಿ ಅಣೆಕಟ್ಟು ಪ್ರದೇಶದ ರಾಜ್ಯಗಳ ಜೊತೆಗೆ ಮಾತುಕತೆ ನಡೆಸಿ ಪ್ರಸ್ತುತ ವರದಿಗಳನ್ನು ಪಡೆದುಕೊಂಡಿತು. ಸೆಪ್ಟೆಂಬರ್ನಲ್ಲಿ ತಮಿಳುನಾಡಿಗೆ 99.86 ಟಿಎಂಸಿ ನೀರು ಹರಿಸಬೇಕಿದ್ದು ಇದರ ಬದಲಾಗಿ ಬಿಳಿಗುಂಡ್ಲುವಿನಲ್ಲಿ 192.371 ಟಿಎಂಸಿ ನೀರು ಹರಿದಿರುತ್ತದೆ.
ಬಿಳಿಗುಂಡ್ಲುವಿನಲ್ಲಿ ಹರಿದ ಹೆಚ್ಚುವರಿ ನೀರಿನ ಪ್ರಮಾಣವನ್ನು ಮುಂಬರುವ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯವು ಹರಿಸಬೇಕಾದ ನೀರಿನ ಪ್ರಮಾಣಕ್ಕೆ ಜಮೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಮನವಿ ಮಾಡಿತು. ಮುಂದಿನ ಮಾನ್ಸೂನ್ ತಿಂಗಳುಗಳಲ್ಲಿಯೂ ಸಹ ಒಳ್ಳೆಯ ಮಳೆಯಾಗಬಹುದು ಎಂದು ಹೇಳಿದೆ.
ವಾಹನ ಸವಾರರಿಗೆ ಗುಡ್ ನ್ಯೂಸ್! 20 ಕಿ.ಮೀ ಟೋಲ್ ದರ ಉಚಿತ – ಇನ್ಮುಂದೆ ಹೊಸ ರೂಲ್ಸ್
ಆದರೆ ಕರ್ನಾಟಕದ ವಾದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ. ಬಿಳಿಗುಂಡ್ಲುವಿನಲ್ಲಿ ಹರಿದ ಹೆಚ್ಚುವರಿ ನೀರಿನ ಪ್ರಮಾಣವು ಕರ್ನಾಟಕದ ಜಲಾಶಯಗಳಲ್ಲಿನ ಹೆಚ್ಚುವರಿ ನೀರಿನ ಪ್ರಮಾಣವಾಗಿರುತ್ತದೆ. ಈ ಬಾರಿಯೂ ಸಹ ಕರ್ನಾಟಕ ರಾಜ್ಯವು ತನ್ನ ಜಲಾಶಯಗಳು ತುಂಬಿದ ನಂತರವಷ್ಟೇ ನೀರನ್ನು ಹರಿಸಿರುತ್ತದೆ.
ಆದ್ದರಿಂದ, ಕರ್ನಾಟಕವು ಮುಂಬರುವ ತಿಂಗಳುಗಳಲ್ಲಿಯೂ ಸಹ ಕಾವೇರಿ ನ್ಯಾಯಾಧಿಕರಣದ ಅಂತಿಮ ನಿರ್ಧಾರ ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮಾರ್ಪಡಿತ ತೀರ್ಪಿನಂತೆ ನಿಗದಿತ ಪ್ರಮಾಣದ ನೀರನ್ನು ಹರಿಸಬೇಕು ಎಂದು ಆಗ್ರಹಿಸಿತು.
ಎರಡು ರಾಜ್ಯಗಳ ವಾದ ಆಲಿಸಿದ ಬಳಿಕ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಯಾವುದೇ ಮಧ್ಯಂತರ ಆದೇಶ ನೀಡಲಿಲ್ಲ. ಉತ್ತಮ ಮಳೆಯಾಗುತ್ತಿದ್ದು, ಎರಡೂ ರಾಜ್ಯಗಳೂ ಸಹ ನೀರನ್ನು ವಿವೇಚನೆಯಿಂದ ಬಳಸಿ, ಜಲಾಶಯಗಳಲ್ಲಿ ನೀರನ್ನು ಸಂಗ್ರಹಿಸಿಕೊಳ್ಳತಕ್ಕದ್ದು ಎಂದು ಸಲಹೆಯನ್ನು ನೀಡಿದೆ.