ತುಮಕೂರು:- ಬೋರ್ವೆಲ್ ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಚಿಗಣಿಪಾಳ್ಯ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ.
ಶನಿವಾರ ರಾತ್ರಿ ಕಂಬಳ ನೋಡಿದ ಐವರು ಕಾರಿನಲ್ಲಿ ಮಂಗಳೂರಿಗೆ ವಾಪಸ್ ತೆರಳುತ್ತಿದ್ದರು. ಈ ವೇಳೆ ಬೋರ್ವೆಲ್ ಕೊರೆಯುವ ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಘಟನೆಯಲ್ಲಿ ಮಂಗಳೂರಿನ ಪರೆರಾರ ಬಜಪ್ಪೆ ಗ್ರಾಮದ ನಿವಾಸಿ ಕಿಶಾನ್ ಶೆಟ್ಟಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಭಟ್ಟರ ತೋಟ ಗ್ರಾಮದ ನಿವಾಸಿ ಫಿಲಿಪ್ ನೇರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರಿನಲ್ಲಿದ್ದ ಐವರು ಕಂಬಳವನ್ನು ವೀಕ್ಷಿಸಲೆಂದೇ ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದರಂತೆ. ಶನಿವಾರ ಕಂಬಳ ವೀಕ್ಷಿಸಿದ್ದ ಅವರು ಮಂಗಳೂರಿಗೆ ವಾಪಸ್ ತೆರಳುತ್ತಿದ್ದರಂತೆ. ಲಾರಿ ಹಾಗೂ ಕಾರು ವೇಗವಾಗಿ ಚಲಾಯಿಸಿದ್ದೇ ಈ ಅಪಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.