ಬೆಂಗಳೂರು: ಸೌತ್ ಎಂಡ್ ಸರ್ಕಲ್ ನಲ್ಲಿರುವ ಕೆಂಪೇಗೌಡ ನಗರದ ಸಹಕಂದಾಯ ಅಧಿಕಾರಿ ಕಛೇರಿಗೆ ಶುಕ್ರವಾರ ಸಂಜೆ ಭೇಟಿ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಆಸ್ತಿ ದಾಖಲೆಗಳ ಡಿಜಿಟೈಸೇಷನ್ ವ್ಯವಸ್ಥೆ ಪರಿಶೀಲನೆ ನಡೆಸಿದರು.
ಸಹ ಕಂದಾಯ ಅಧಿಕಾರಿ ಕಛೇರಿಯಲ್ಲಿ ನಡೆಯುತ್ತಿರುವ ಆಸ್ತಿ ಪುಸ್ತಕಗಳ ಸ್ಕಾನಿಂಗ್ ಅನ್ನು ವೀಕ್ಷಿಸಿದರು. ಮಾಹಿತಿ ಪಡೆದರು.
ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ರಿಜಸ್ಟರ್ ಪುಸ್ತಕದಲ್ಲಿ ಬರೆದಿರುವುದನ್ನು ಸ್ಕ್ಯಾನಿಂಗ್ ಮಾಡಿ, ಸ್ಕ್ಯಾನಿಂಗ್ ಆಗಿರುವ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ತದನಂತರ ಮಾಹಿತಿಯನ್ನು ಟೈಪ್ ಮಾಡಿ ವೆರಿಫಿಕೇಷನ್ ಮಾಡಿದ ನಂತರ ಸಾಪ್ಟ್ ವೇರ್ ನಲ್ಲಿ ಪ್ರತಿಯೊಂದು ಆಸ್ತಿಯನ್ನು ಗಣಕಯಂತ್ರದ ಮೂಲಕ ಡಿಜಿಟೈಸೇಷನ್ ಮಾಡಲಾಗುತ್ತದೆ. ಇದನ್ನು ಯಾರೂ ನಕಲು ಮಾಡಲು ಸಾಧ್ಯವಿಲ್ಲ. ಒಮ್ಮೆ ಡಿಜಿಟೈಸೇಷನ್ ಮಾಡಿದ ನಂತರ ಆಸ್ತಿ ಖಾತಾವನ್ನು ಆನ್ ಲೈನ್ ಮೂಲಕ ಎಲ್ಲಿ ಬೇಕಾದರೂ ನೋಡಬಹುದು ಎಂದು ಮಾಹಿತಿ ನೀಡಿದರು. ಡಿಸಿಎಂ ಪಾಲಿಕೆ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ನಗರದಾದ್ಯಂತ ತ್ವರಿತಗತಿಯಲ್ಲಿ ಎಲ್ಲಾ ಆಸ್ತಿಗಳನ್ನು ಡಿಜಿಟೈಸೇಷನ್ ಮಾಡಲು ಸೂಚನೆ ನೀಡಿದರು.
ಎಸ್.ಜೆ.ಪಿ ರಸ್ತೆ ವೈಟ್ ಟಾಪಿಂಗ್ ಯೋಜನೆ ಪರಿಶೀಲನೆ:
ಸಿಲ್ವರ್ ಜೂಬ್ಲಿ ಪಾರ್ಕ್(ಎಸ್.ಜೆ.ಪಿ) ಜಂಕ್ಷನ್ ನಿಂದ ಎಸ್.ಪಿ ರಸ್ತೆ ಮೂಲಕ ಹಡ್ಸನ್ ರಸ್ತೆ(ಪಾದಚಾರಿ ಮೇಲ್ಸೇತುವೆಯ ವರೆಗೆ)ಯವರೆಗೆ 500 ಮೀಟರ್ ರಸ್ತೆಯನ್ನು ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು, ಇಂದು ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆ ಧರ್ಮರಾಯ ಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯು ತುಂಬಾ ಹಾಳಾಗಿದ್ದು , ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ, ತ್ವರಿತವಾಗಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿವಿಕೆ ಅಯ್ಯಂಗರ್ ರಸ್ತೆ ಪರಿಶೀಲನೆ:
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿ.ವಿ.ಕೆ ಅಯ್ಯಂಗರ್ ರಸ್ತೆ ಹಾಗೂ ಒಟಿಸಿ ರಸ್ತೆಯ ನಡುವಿನ ಚಿಕ್ಕಪೇಟೆ ವೃತ್ತದ ಬಳಿ ಬರುವ ಕ್ರಾಸ್ ರಸ್ತೆಗಳಾದ ಕಿಲಾರೆ ರಸ್ತೆ, ಆರ್.ಟಿ ಸ್ಟ್ರೀಟ್ ರಸ್ತೆ, ಎ.ಎಸ್ ಆಚಾರ್ ಸ್ಟ್ರೀಟ್ ರಸ್ತೆಯನ್ನು ಕಾಂಪ್ರೆನ್ಸಿವ್ ಡೆವಲಪ್ಮೆಂಟ್ ಅಡಿಯಲ್ಲಿ ವೈಟ್ ಟಾಪಿಂಗ್, ಪಾದಚಾರಿ ಮಾರ್ಗ ಅಭಿವೃದ್ಧಿ ಸೇರಿದಂತೆ ಇನ್ನಿತರೆ ಅಗತ್ಯ ಕಾಮಗಾರಿ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿದ್ದು, ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಚಿಕ್ಕಪೇಟೆ ವೃತ್ತದಲ್ಲಿ ಅನಧಿಕೃತವಾಗಿ ಓಎಫ್.ಸಿ ಕೇಬಲ್ ಗಳು ಅಳವಡಿಸಿರುವುದನ್ನು ಪರಿಶೀಲಿಸಿ ಅದನ್ನು ಕೂಡಲೆ ತೆರವುಗೊಳಿಸಲು ಸೂಚನೆ ನೀಡಿದರು. ಜೊತೆಗೆ ಬೀದಿ ಬದಿ ದೀಪಗಳನ್ನು ಅಳವಡಿಸಲು ಸೂಚನೆ ನೀಡಿದರು.
ಮೆಜೆಸ್ಟಿಕ್- ಬಿಎಂಟಿಸಿ ಒಳ ರಸ್ತೆ ಪರಿಶೀಲನೆ:
ಧನ್ವಂತ್ರಿ ರಸ್ತೆ ಮತ್ತು ಗುಬ್ಬಿ ತೋಟದಪ್ಪ ರಸ್ತೆಯ ನಡುವಿನ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾದ ಪ್ರಮುಖ ರಸ್ತೆಯನ್ನು ಬಿಎಂಟಿಸಿಯಿಂದ ಪಾಲಿಕೆಗೆ ಹಸ್ತಾಂತರಗೊಳಿಸಿಕೊಂಡು ವೈಟ್ ಟಾಪಿಂಗ್ ರಸ್ತೆಯನ್ನಾಗಿ ನಿರ್ಮಾಣ ಮಾಡಲು ಸೂಚಿಸಿದರು. ಮೆಜೆಸ್ಟಿಕ್ ರಸ್ತೆ ತುಂಬಾ ಆಳಾಗಿದ್ದು, ತಾತ್ಕಾಲಿಕವಾಗಿ ದುರಸ್ತಿಪಡಿಸಿ ನಂತರ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ವಲಯ ಆಯುಕ್ತರಾದ ವಿನೋತ್ ಪ್ರಿಯಾ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಕಂದಾಯ ವಿಭಾಗದ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಕಂದಾಯ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.