ಬಲೂಚಿಸ್ತಾನ: ಪಾಕ್ ನಲ್ಲಿ ನಡೆಯಲಿರುವ ಚುನಾವಣೆ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಪಾಕಿಸ್ತಾನದ ಬಲೂಚಿಸ್ತಾನ ಪಿಶಿನ್ನಲ್ಲಿರುವ ಸ್ವತಂತ್ರ ಅಭ್ಯರ್ಥಿಯ ಪಕ್ಷದ ಕಚೇರಿಯ ಹೊರಗೆ ಬಾಂಬ್ ಸ್ಫೋಟಗೊಂಡಿದ್ದು ಘಟನೆಯಲ್ಲಿ ಹನ್ನೆರಡು ಮಂದಿ ಮೃತಪಟ್ಟಿದ್ದಾರೆ.
ಪಾಕಿಸ್ತಾನದ ಪಿಶಿನ್ನ ಖನೋಜೈ ಪ್ರದೇಶದಲ್ಲಿ ಸ್ವತಂತ್ರ ಅಭ್ಯರ್ಥಿ ಅಸ್ಫಂಡ್ ಯಾರ್ ಖಾನ್ ಕಾಕರ್ ಅವರ ಕಚೇರಿಯ ಹೊರಗೆ ಬಾಂಬ್ ಸ್ಫೋಟಿಸಲಾಗಿದೆ. ಘಟನೆಯಲ್ಲಿ 12 ಜನ ಮೃತಪಟ್ಟಿದ್ದು 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಗಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವೇಳೆ ಸ್ವತಂತ್ರ ಅಭ್ಯರ್ಥಿ ಅಸ್ಫಂಡ್ ಯಾರ್ ಖಾನ್ ಕಾಕರ್ ಅವರು ತಮ್ಮ ಕಚೇರಿಯಲ್ಲಿ ಇರಲಿಲ್ಲ.
ಘಟನೆಯ ಕುರಿತು ಪಾಕಿಸ್ತಾನದ ಚುನಾವಣಾ ಆಯೋಗವು ಪ್ರಾಂತೀಯ ಮುಖ್ಯ ಕಾರ್ಯದರ್ಶಿ ಮತ್ತು ಪ್ರಾಂತೀಯ ಪೊಲೀಸ್ ಮುಖ್ಯಸ್ಥರಿಂದ ತಕ್ಷಣದ ವರದಿಗಳನ್ನು ಕೇಳಿದೆ. ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶವನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಅಸ್ಫಂಡ್ ಯಾರ್ ಖಾನ್ ಕಾಕರ್ ಅವರ ಮೋಟಾರ್ ಬೈಕ್ನಲ್ಲಿ ಬಾಂಬ್ ಇಡಲಾಗಿತ್ತು ಎಂದು ಜಿಲ್ಲಾಧಿಕಾರಿ ಜುಮಾ ದಾದ್ ಮಾಹಿತಿ ನೀಡಿದ್ದಾರೆ.