ಮಂಗಳೂರು: ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಭೇಟಿ ನೀಡಿದ್ದಾರೆ. ನಿನ್ನೆ ತಡರಾತ್ರಿ ಸುಬ್ರಹ್ಮಣ್ಯಕ್ಕೆ ಆಗಮಿಸಿರುವ ಕತ್ರಿನಾ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಕುಕ್ಕೆಗೆ ಸಾಮಾನ್ಯವಾಗಿ ಮದುವೆ ಆಗದವರು, ಮಕ್ಕಳಾಗದವರು ಭೇಟಿ ಕೊಟ್ಟು ಪೂಜೆ ಸಲ್ಲಿಸುತ್ತಾರೆ. ಅನೇಕರು ಸರ್ಪ ಸಂಸ್ಕಾರ ಪೂಜೆ ಮಾಡಿಸಿ ದೋಷ ನಿವಾರಣೆ ಮಾಡಿಕೊಳ್ತಾರೆ. ಇದೀಗ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡ ಕುಕ್ಕೆ ಸುಬ್ರಹ್ಮಣ್ಯನ ಮೊರೆ ಹೋಗಿದ್ದಾರೆ. ಸಂತಾನಕ್ಕಾಗಿ ನಟಿ ಸರ್ಪ ಸಂಸ್ಕಾರ ಪೂಜೆ ಮಾಡಿಸಿದ್ದಾರೆ ಎನ್ನಲಾಗ್ತಿದೆ.
ಮಾಸ್ಕ್ ಹಾಕಿಕೊಂಡು, ತಲೆಗೆ ದುಪ್ಪಟ್ಟ ಹಾಕಿ ದೇವರ ದರ್ಶನ ಪಡೆದ ಕತ್ರಿನಾ ಅವರು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಇವತ್ತಿನ ಪೂಜೆ ಮುಗಿಸಿದ ನಟಿ ಕತ್ರಿನಾ ಕೈಫ್, ಮಧ್ಯಾಹ್ನದ ಅನ್ನ ಪ್ರಸಾದ ಸೇವಿಸಿ ಖಾಸಗಿ ಹೋಟೆಲ್ಗೆ ತೆರಳಿದ್ರು. ನಾಳೆ ಮತ್ತೊಂದು ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಕಳೆದ ವರ್ಷ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಸೇರಿ ಸುನೀಲ್ ಶೆಟ್ಟಿ, ಅಹಾನ್ ಶೆಟ್ಟಿ, ಆತಿಯಾ ಶೆಟ್ಟಿ, ಕೆ.ಎಲ್.ರಾಹುಲ್ ಭೇಟಿ ನೀಡಿದ್ದರು.
ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರನ್ನು ಪ್ರೀತಿಸಿ ಕೈ ಹಿಡಿದಿರುವ ಕತ್ರಿನಾ ಮದುವೆ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಸದ್ಯ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಕತ್ರಿನಾ ಕೈಫ್ ತಂದೆ ಮುಸ್ಲಿಂ ಆಗಿದ್ದು, ತಾಯಿ ಕ್ರಿಶ್ಚಿಯಲ್ ಆಗಿದ್ದಾರೆ. ನಟಿ ಕತ್ರಿನಾ ಕೈಫ್ ಮದುವೆ ಬಳಿಕ ಹಿಂದೂ ದೇಗುಲಗಳಿಗೆ ಹೆಚ್ಚಾಗಿ ಭೇಟಿ ನೀಡ್ತಿದ್ದಾರೆ. ಹಿಂದೂ ದೇವರಲ್ಲಿ ನಂಬಿಕೆ ಹೊಂದಿದ್ದಾರೆ. ಇದೀಗ ನಟಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ಸಂತಾನ ಪ್ರಾಪ್ತಿಗಾಗಿ ಪೂಜೆ ಸಲ್ಲಿಸಿದ್ದಾರೆ.