ಲಂಡನ್: ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಭಾರತೀಯ ಮೂಲದವಿದ್ಯಾರ್ಥಿನಿಯ ಶವ ಸ್ಕಾಟ್ಲೆಂಡ್ನ ನದಿಯೊಂದರಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಇನ್ನೂ ಅಧಿಕೃತವಾಗಿ ಗುರುತಿಸದಿದ್ದರೂ ಆಕೆಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.
ಕೇರಳದ ಸಂತ್ರಾ ಸಾಜು ಮೃತ ವಿದ್ಯಾರ್ಥಿನಿ ಎನ್ನಲಾಗುತ್ತಿದೆ. ಈಕೆ ಸ್ಕಾಟಿಷ್ ರಾಜಧಾನಿ ಎಡಿನ್ಬರ್ಗ್ನಲ್ಲಿರುವ ಹೆರಿಯಟ್-ವ್ಯಾಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಡಿಸೆಂಬರ್ 27 ರಂದು ಬೆಳಗ್ಗೆ 11-55ರ ಸುಮಾರಿಗೆ ಎಡಿನ್ಬರ್ಗ್ ಬಳಿಯ ನ್ಯೂಬ್ರಿಡ್ಜ್ ನದಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಗುರುತನ್ನು ಇನ್ನೂ ಅಧಿಕೃತವಾಗಿ ಪತ್ತೆ ಹಚ್ಚಿಲ್ಲ. ಆದಾಗ್ಯೂ, ಸಂತ್ರಾ ಸಾಜು ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.
ಸಾವಿನ ಕುರಿತು ಯಾವುದೇ ಅನುಮಾನ ಉಂಟಾಗಿಲ್ಲ. ವರದಿಯನ್ನು ಸ್ಕಾಟ್ಲೆಂಡ್ನ ಪ್ರಾಸಿಕ್ಯೂಷನ್ ಸೇವೆ ಮತ್ತು ತನಿಖಾ ಸಂಸ್ಥೆಗೆ ಕಳುಹಿಸಲಾಗುವುದು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಡಿಸೆಂಬರ್ 6 ರಂದು ಸಂಜೆ ಲಿವಿಂಗ್ಸ್ಟನ್ನ ಆಲ್ಮಂಡ್ವೇಲ್ನಲ್ಲಿರುವ ಅಸ್ಡಾ ಸೂಪರ್ಮಾರ್ಕೆಟ್ ಅಂಗಡಿಯಲ್ಲಿ ಸಾಜು ಕೊನೆಯ ಬಾರಿಗೆ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದ್ದರು.
ತುರ್ತಾಗಿ ಕಾಣೆಯಾದ ಸಾಜು ಕುರಿತು ಆಕೆಯ ಕುಟುಂಬಸ್ಥರು ಹಾಗೂ ಸ್ನೇಹಿತರಿಂದ ದೂರು ಸ್ವೀಕರಿಸಿದ ಪೊಲೀಸರು ಆಕೆ ಬಗ್ಗೆ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ತಿಳಿಸಿದ್ದರು.ಸೂಪರ್ ಮಾರ್ಕೆಟ್ ನಲ್ಲಿದ್ದ ಸಾಜು ಅವರ ಫೋಟೋವನ್ನು ಬಿಡುಗಡೆ ಮಾಡಿದ್ದ ಪೊಲೀಸರು, ಆಕೆಯ ಪತ್ತೆಗಾಗಿ ವ್ಯಾಪಕ ವಿಚಾರಣೆ ನಡೆಸುತ್ತಿದ್ದರು. ಈ ಮಧ್ಯೆ ಆಕೆಯದು ಎನ್ನಲಾದ ಮೃತದೇಹ ನದಿಯೊಂದರಲ್ಲಿ ಪತ್ತೆಯಾಗಿದ್ದು ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.