ಅಫ್ಘಾನಿಸ್ತಾನದ ಮೇಲೆ ಇತ್ತೀಚೆಗೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಖಂಡಿಸಿರುವ ಭಾರತ ತನ್ನ ಆಂತರಿಕ ವೈಫಲ್ಯಗಳಿಗೆ ಬೇರೆಯವರನ್ನು ದೂಷಿಸುವುದು ಇಸ್ಲಾಮಾಬಾದ್ನ ಹಳೆಯ ಚಾಳಿಯಾಗಿದೆ ಎಂದಿದೆ.
“ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅಫ್ಘಾನ್ ನಾಗರಿಕರ ಮೇಲೆ ವೈಮಾನಿಕ ದಾಳಿ ನಡೆಯುತ್ತಿರುವ ಬಗ್ಗೆ ಮಾಧ್ಯಮ ವರದಿಗಳನ್ನು ನಾವು ಗಮನಿಸಿದ್ದೇವೆ. ದಾಳಿಯಲ್ಲಿ ಹಲವಾರು ಅಮೂಲ್ಯ ಜೀವಗಳು ಕಳೆದುಹೋಗಿವೆ” ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್ ಸೋಮವಾರ ಅಫ್ಘಾನ್ ನಾಗರಿಕರ ಮೇಲಿನ ವೈಮಾನಿಕ ದಾಳಿಯ ಬಗ್ಗೆ ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
“ಮುಗ್ಧ ನಾಗರಿಕರ ಮೇಲೆ ಯಾವುದೇ ರೀತಿಯ ದಾಳಿಯನ್ನು ನಾವು ನಿಸ್ಸಂದಿಗ್ಧವಾಗಿ ಖಂಡಿಸುತ್ತೇವೆ. ತನ್ನ ಆಂತರಿಕ ವೈಫಲ್ಯಗಳಿಗೆ ನೆರೆಹೊರೆಯವರನ್ನು ದೂಷಿಸುವುದು ಪಾಕಿಸ್ತಾನದ ಹಳೆಯ ಅಭ್ಯಾಸವಾಗಿದೆ. ಈ ನಿಟ್ಟಿನಲ್ಲಿ ಅಫ್ಘಾನ್ ವಕ್ತಾರರ ಪ್ರತಿಕ್ರಿಯೆಯನ್ನು ಸಹ ನಾವು ಗಮನಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ 24 ರಂದು, ಅಫ್ಘಾನಿಸ್ತಾನದೊಳಗೆ ಪಾಕಿಸ್ತಾನ ನಡೆಸಿದ ವಾಯು ದಾಳಿಯಲ್ಲಿ ಹಲವಾರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 46 ಜನ ಸಾವಿಗೀಡಾಗಿದ್ದಾರೆ. ಪಾಕಿಸ್ತಾನದ ಕ್ರಮಕ್ಕೆ ವಿಶ್ವಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಎಚ್ಚರಿಕೆ ನೀಡಿದೆ.