ಹಾವೇರಿ:- ರಾಜ್ಯ ಸರ್ಕಾರದ ವಿಫಲದ ಬಗ್ಗೆ ಬ್ಲ್ಯಾಕ್ ಪೇಪರ್ ಬಿಡುಗಡೆ ಮಾಡಲಾಗುತ್ತದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಬಜೆಟ್ ಮಂಡನೆಗೂ ಮುಂಚೆ ಸಿಎಂ ಸಿದ್ದರಾಮಯ್ಯ ಅವರು ಕಳೆದ ವರ್ಷದ ಬಜೆಟ್ನಲ್ಲಿ ಮೀಸಲಿಟ್ಟ ಹಣವೆಷ್ಟು, ಖರ್ಚಾಗಿರುವ ಹಣವೆಷ್ಟು ಎನ್ನುವುದನ್ನು ಶ್ವೇತಪತ್ರ ಹೊರಡಿಸಬೇಕು. ಇಲ್ಲದಿದ್ದರೆ, ರಾಜ್ಯ ಸರ್ಕಾರ ಎಲ್ಲಿ ವಿಫಲವಾಗಿದೆ ಎನ್ನುವುದನ್ನು ಬ್ಲ್ಯಾಕ್ ಪೇಪರ್ ಬಿಡುಗಡೆ ಮಾಡಲು ರಾಜ್ಯ ಬಿಜೆಪಿ ಘಟಕ ಸಿದ್ಧರಾಗಬೇಕು ಎಂದು ಸೂಚಿಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು
ನಾನು ಕಾಂಗ್ರೆಸ್ನ ಆಂತರಿಕ ವಿಚಾರದಲ್ಲಿ ಯಾವುದೇ ರೀತಿಯ ಹೇಳಿಕೆ ನೀಡಲು ಸಿದ್ಧನಿಲ್ಲ. ಜನರು ಇವರಿಗೆ ಆಡಳಿತ ನಡೆಸಲು ಅವಕಾಶ ಕೊಟ್ಟಿದ್ದಾರೆ. ಅದನ್ನು ಮಾಡಲು ಇವರಿಗೆ ಸಮಯವಿಲ್ಲ. ಯಾಕೆಂದರೆ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಇಲಾಖೆ ಹಾಗೂ ನಿಗಮಗಳ ಅಧಿಕಾರಿಗಳ ಸಭೆ ನಡೆಸಿದರು. ಈ ವರ್ಷ ಹಿಂದುಳಿದ ವರ್ಗಗಳ ನಿಗಮಗಳಿಗೆ ಎಷ್ಟು ಹಣ ಖರ್ಚಾಗಿದೆ ಎಂದು ಸಿಎಂ ಮಾಡಿರುವ ಸಭೆಯಲ್ಲಿ ಚರ್ಚೆಯೇ ಆಗಲಿಲ್ಲ. ಹಿಂದುಳಿದ ವರ್ಗಗಳ ನಾಯಕರು ಸಿಎಂರನ್ನು ಕೇಳಬೇಕಿತ್ತು. ಅದನ್ನು ವಿರೋಧ ಪಕ್ಷವಾಗಿ ಬಿಜೆಪಿ ಮಾಡುತ್ತದೆ ಎಂದು ಹೇಳಿದರು