ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕಲಹ ಪಕ್ಷಕ್ಕೆ ತೀವ್ರ ಮುಜುಗರವುಂಟು ಮಾಡಿದೆ. ಎರಡು ಬಣಗಳು ಪ್ರತ್ಯೇಕ ಸಭೆ ನಡೆಸಿವೆ. ಈಗಾಗಲೇ ಶಾಸಕ ಯತ್ನಾಳ್ ಗೆ ಶಿಸ್ತು ಸಮಿತಿ ನೋಟಿಸ್ ಕೂಡ ಜಾರಿ ಮಾಡಿದೆ. ಇದೀಗ ಪಕ್ಷದಲ್ಲಿನ ಆಂತರಿಕ ಕಲಹಕ್ಕೆ ಅಂತ್ಯ ಹಾಡಲು ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಿದೆ. ಮಂಗಳವಾರ ಇಡೀ ದಿನ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ.
ನಾಳೆ ಬೆಳಗ್ಗೆ 10.30ಕ್ಕೆ ಕೋರ್ ಕಮಿಟಿ ಸಭೆ ಆರಂಭವಾಗಲಿದ್ದು, ಸಭೆಯಲ್ಲಿ ಪಕ್ಷದ ಸದ್ಯದ ಬೆಳವಣಿಗೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ. ಬಿಜೆಪಿಯ ಬಣ ಬಡಿದಾಟದಲ್ಲಿ ತೊಡಗಿರುವ ನಾಯಕರಿಗೆ ಮೂಗುದಾರ ಹಾಕಲೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಆಗಮಿಸಲಿದ್ದಾರೆ. ಎರಡು ಬಣದ ನಾಯಕರೊಂದಿಗೆ ಸಭೆ ನಡೆಸಿ, ಹೈಕಮಾಂಡ್ ಗೆ ವರದಿ ಸಲ್ಲಿಸಲಿದ್ದಾರೆ.