ದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅವರ ಪತ್ನಿಗೆ ಸೇರಿದ್ದ ಕಾರು ಕಳ್ಳತನವಾಗಿರುವ ಘಟನೆ ರಾಷ್ಟ್ರರಾಜಧಾನಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆಗ್ನೇಯ ದೆಹಲಿಯ (South East Delhi) ಗೋವಿಂದಪುರಿ ಪ್ರದೇಶದಿಂದ ಟೊಯೊಟಾ ಫಾರ್ಚೂನರ್ (Toyota Fortuner) ಕಾರನ್ನು ಕಳ್ಳತನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 19ರಂದು ಕಾರು ಕಳ್ಳತನವಾಗಿದೆ. ಫಾರ್ಚೂನರ್ ಕಾರು ಕಳ್ಳತನ ಬಗ್ಗೆ ಡ್ರೈವರ್ ಜೋಗಿಂದರ್ ಸಿಂಗ್ ಅದೇ ದಿನ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಸದ್ಯ ಕಾರು ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
ಮಾಹಿತಿ ಪ್ರಕಾರ, ಚಾಲಕ ಜೋಗಿಂದರ್ ಅವರು ಟೊಯೊಟಾ ಫಾರ್ಚುನರ್ ಕಾರನ್ನು ಸರ್ವಿಸ್ ಮಾಡಿದ ನಂತರ ಗೋವಿಂದಪುರಿಗೆ ತಂದು ತಮ್ಮ ಮನೆಯಲ್ಲಿ ನೀಲಿಸಿದ್ದರು. ಊಟ ಮಾಡಿ ಬರುವಷ್ಟರಲ್ಲಿ ಕಾರು ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕದ್ದ ಕಾರು ಗುರುಗ್ರಾಮ್ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ. ಆದರೆ, ಪ್ರಯತ್ನಗಳ ಹೊರತಾಗಿಯೂ, ವಾಹನದ ಯಾವುದೇ ಕುರುಹು ಇನ್ನೂ ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಕಳ್ಳತನವಾದ ಕಾರು ಹಿಮಾಚಲ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿದೆ ಎಂದು ಹೇಳಲಾಗಿದೆ.