ಗುಳೇದಗುಡ್ಡ :– ಪ್ರಧಾನಿ ಮೋದಿಗೆ ತಾಯಿ ಕರುಳು ಇಲ್ಲ ಎಂದು ಸಚಿವ ತಿಮ್ಮಾಪೂರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರೈತ ತೊಂದರೆಗೊಳಗಾದಾಗ ದೇಶದ ಪ್ರಧಾನಿ ಅವರ ಪರವಾಗಿರಬೇಕು. ದೇಶದ ಪ್ರಧಾನಿಗೆ ತಾಯಿಕರುಳ ಇರಬೇಕು. ಆದರೆ, ನಮ್ಮ ಪ್ರಧಾನಿ ಚುನಾವಣೆ ರಾಜಕಾರಣದಲ್ಲಿ ಬ್ಯುಜಿಯಾಗಿದ್ದು, ಪಕ್ಷಪಾತ ಧೋರಣೆ ತೋರುತ್ತಿರುವುದು ಬಹಳ ದುದೈವದ ಸಂಗತಿಯಾಗಿದೆ ಎಂದರು.
ರಾಜ್ಯ ಬರದಿಂದ ತತ್ತರಿಸಿದೆ. ರಾಜ್ಯ ಸರ್ಕಾರ ಬರ ಪರಿಹಾರ ಕೇಳಲು ಹೋದರೆ ಪ್ರಧಾನಿ ಕೈಗೆ ಸಿಗುತ್ತಿಲ್ಲ. ಸಂಕಷ್ಟ ಕಾಲದಲ್ಲೂ ಅವರು ರಾಜಕೀಯ ಮಾಡುತ್ತಿದ್ದಾರೆ. ಒಬ್ಬ ಪ್ರಧಾನಿಯಾಗಿದ್ದರೂ ಕೂಡ ಕಾರ್ಪೋರೇಷನ್ ಚುನಾವಣೆ ಪ್ರಚಾರದಲ್ಲೂ ಅವರು ಭಾಗವಹಿಸುತ್ತಾರೆ. ಇಂಥ ಪ್ರಧಾನಿಯನ್ನು ನಾವು ನೋಡಿರಲೇ ಇಲ್ಲ. ನಮ್ಮ ಸರ್ಕಾರ ಕೇಂದ್ರದ ಬಳಿ ಭಿಕ್ಷೆ ಕೇಳುತ್ತಿಲ್ಲ. ನಮಗೆ ಬರಬೇಕಾದ ನ್ಯಾಯಯುತ ಪರಿಹಾರವನ್ನು ನಾವು ಕೇಳುತ್ತಿದ್ದೇವೆ. ಅವರು ಹೆಚ್ಚಿನ ಪರಿಹಾರ ಕೊಡುವದಂತೂ ದೂರದ ಮಾತು. ನಮಗೆ ಕೊಡುಬೇಕಾದ ಪರಿಹಾರವನ್ನಾದರೂ ಕೊಡಬೇಕಲ್ಲವೇ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದಾರೆ. ಆದರೆ, ಯಾವೊಬ್ಬ ಸಂಸದರು ಪ್ರಧಾನಿ ಬಳಿ ಹೋಗಿ ರಾಜ್ಯದಲ್ಲಿ ಬರ ಸ್ಥಿತಿ ಎದುರಾಗಿದೆ. ನಮ್ಮ ರಾಜ್ಯಕ್ಕೆ ಬರ ಪರಿಹಾರ ಕೊಡಿ ಎಂದು ಕೇಳುವ ಧೈರ್ಯ ತೋರುತ್ತಿಲ್ಲ. ಪ್ರಧಾನಿ ಬಳಿ ಹೋಗಿ ಪರಿಹಾರ ಕೇಳುವ ತಾಕತ್ತು ರಾಜ್ಯದ ಬಿಜೆಪಿ ಸಂಸದರಿಗಿಲ್ಲ ಎಂದು ಸಚಿವ ಆರ್.ಬಿ.ತಿಮ್ಮಾಪೂರ ಲೇವಡಿ ಮಾಡಿದರು.