ಬೆಂಗಳೂರು:- ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಕ್ಕರೆ ಕಾರ್ಖಾನೆ ಬಂದ್ ಆಗಿದ್ದು ಅನುಮತಿ ಪಡೆಯುವರೆಗೂ ಕಾರ್ಖಾನೆ ನಡೆಸಲಾಗದು ಎಂದು ಕೋರ್ಟ್ ಹೇಳಿದೆ.
ಯತ್ನಾಳ್ ಕುಟುಂಬದ ಒಡೆತನದಲ್ಲಿರುವ ಸಕ್ಕರೆ ಹಾಗೂ ಎಥೆನಾಲ್ ಘಟಕದ ಕಾರ್ಯಾಚರಣೆ ಸ್ಥಗಿತಗೊಳಿಸುವ ಕುರಿತು ಮಾಹಿತಿ ಪಡೆದು ತಿಳಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಯತ್ನಾಳ್ ಪುತ್ರ ಹಾಗೂ ಸಂಸ್ಥೆಯ ನಿರ್ದೇಶಕ ರಮಣಗೌಡ ಬಿ.ಪಾಟೀಲ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ
ವಿಚಾರಣೆ ವೇಳೆ ಅರ್ಜಿದಾರರ ವಕೀಲರು, ಘಟಕವನ್ನು ರಾಜಕೀಯ ಉದ್ದೇಶದಿಂದ ಸ್ಥಗಿತಗೊಳಿಸಲು ಒತ್ತಾಯಿಸಲಾಗುತ್ತಿದೆ ಎಂದು ವಾದಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಕಾರ್ಖಾನೆ ನಿಯಮದ ಪ್ರಕಾರ ನಡೆಯುತ್ತಿಲ್ಲ. ಇದರಿಂದಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ನ್ಯಾಯಾಲಯದ ಮುಂದೆ ವಿವರಿಸಿದ್ದಾರೆ
ಬಳಿಕ ನ್ಯಾಯಾಲಯ, ಕಾರ್ಖಾನೆ ಮುಚ್ಚುವ ಸಂಬಂಧ ಅರ್ಜಿದಾರರಿಂದ ಮಾಹಿತಿ ಪಡೆದು ತಿಳಿಸಬೇಕು ಎಂದು ಸೂಚಿಸಿದೆ. ಅಲ್ಲದೇ ವಿಚಾರಣೆಯನ್ನು ಫೆಬ್ರವರಿ 8ಕ್ಕೆ ಮುಂದೂಡಿದೆ. ಅರ್ಜಿದಾರರು 2021ರಲ್ಲಿ ಕಾರ್ಖಾನೆ ಖರೀದಿಸಿದ್ದು, ನಾವೀಗ 2024ರಲ್ಲಿದ್ದೇವೆ. ಈ ಅವಧಿಯಲ್ಲಿ ಅಗತ್ಯ ಅನುಮತಿ ಪಡೆಯಬೇಕಿತ್ತು. ಕಾನೂನಿನ ಪ್ರಕಾರ ನೀವು ಅನುಮತಿ ಪಡೆಯುವವರೆಗೆ ಕಾರ್ಖಾನೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.