ಬೆಳಗಾವಿ:– ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು, ವಿಪಕ್ಷ ನಾಯಕರು ಇನ್ನೂ ಭ್ರಮಾಲೋಕದಲ್ಲೇ ಇದ್ದಾರೆ. ಅದರಿಂದ ಅವರು ಹೊರಬರುವುದೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಹೇಳುತ್ತಲೇ ಇರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇನ್ನೂ ಭ್ರಮಾಲೋಕದಲ್ಲೇ ಇದ್ದಾರೆ. ಅದರಿಂದ ಅವರು ಹೊರಬರುವುದೂ ಇಲ್ಲ ಎಂದರು.
ನಮ್ಮ ಸರ್ಕಾರ ಸುಭದ್ರವಾಗಿದೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ನೀರಿನಿಂದ ತೆಗೆದ ಮೀನಿನಂತೆ ವಿಲವಿಲ ಒದ್ದಾಡುತ್ತಿದ್ದು ಭ್ರಮಾಲೋಕದಲ್ಲಿದ್ದಾರೆ. ಅಧಿವೇಶನದಲ್ಲಿ ವಿಪಕ್ಷಗಳು ಯಾವುದೇ ವಿಚಾರ ಎತ್ತಿದರೂ ಉತ್ತರ ಕೊಡಲು ಸರ್ಕಾರ ಸಿದ್ಧವಿದೆ.
ಅನಗತ್ಯವಾಗಿ ವಿಳಂಬ ಅಥವಾ ಕಾಲಹರಣ ಮಾಡುವುದಿಲ್ಲ. ಬರಗಾಲದ ಚರ್ಚೆ ಮೇಲೆ ಸರ್ಕಾರ ಸೂಕ್ತ ಉತ್ತರ ಕೊಡಲಿದೆ. ಬಿಜೆಪಿ ನಾಯಕರ ಮಧ್ಯೆ ಸಮನ್ವಯದ ಕೊರತೆಯಿಂದ ಕಲಾಪದ ಸಮಯ ವ್ಯರ್ಥವಾಗುತ್ತಿದೆ. ಬಿಜೆಪಿಯೊಳಗೆ ಎಂದಿಗೂ ಸಮನ್ವಯ ಇಲ್ಲ. ಅವರು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದರು. ನಂತರ ಜನರು ಅವರನ್ನು ತಿರಸ್ಕರಿಸಿದ್ದಾರೆ. ಅವರಲ್ಲಿ ಸಮನ್ವಯ ಬರಲು ಸಾಧ್ಯವೇ ಇಲ್ಲ ಎಂದರು.