ಬೆಂಗಳೂರು:- ಶ್ರೀರಾಮನ ಹೆಸರನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಮಭಕ್ತರಿಗೆ ಕಾಂಗ್ರೆಸ್ ಸರ್ಕಾರದಿಂದ ತೊಂದರೆಯಾಗುತ್ತಿದೆ ಎಂದು ಬಿಜೆಪಿ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. 31 ವರ್ಷದ ಹಿಂದಿನ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದಕ್ಕೆ ಬಿಜೆಪಿಯವರು ರಾಜಕೀಯ ಬಣ್ಣ ಹಚ್ಚುತ್ತಿದ್ದಾರೆ ಎಂದರು.
ಕಾಂಗ್ರೆಸ್ನವರು ನಿಜವಾದ ರಾಮಭಕ್ತರು. ಬಿಜೆಪಿಯವರು ಚುನಾವಣೆಗಾಗಿ ರಾಮನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
2008-13 ಮತ್ತು 2020-2023ರವರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಆರ್. ಅಶೋಕ್ ಗೃಹ ಸಚಿವರಾಗಿದ್ದರು. ಆಗ ಪ್ರಕರಣ ಏಕೆ ಹಿಂಪಡೆಯಲಿಲ್ಲ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದ ನಾಯಕರಾದ ನಂತರ ಅಶೋಕ್ ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ಚುನಾವಣೆಗೆ ಕಾರ್ಯಕರ್ತರನ್ನು ಬಳಸಿಕೊಂಡು ನಂತರ ಮರೆಯುತ್ತದೆ ಎನ್ನುವುದಕ್ಕೆ ಇದು ಸೂಕ್ತ ನಿದರ್ಶನ ಎಂದು ಟೀಕಿಸಿದರು.