ಬೆಂಗಳೂರು:– ಬಿಜೆಪಿಯವರು ಧರ್ಮದ ವಿಚಾರವಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯವರು ಧರ್ಮದ ವಿಚಾರವಾಗಿ ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ ಅವರು ಒಂದು ಕೈಯಲ್ಲಿ ಮಂತ್ರಾಕ್ಷತೆ ಹಿಡಿದರೆ, ಮತ್ತೊಂದು ಕೈಯಲ್ಲಿ ದೊಣ್ಣೆ ಹಿಡಿದು ಜನಪರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು. ನೀವು ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದರೂ ನಾವು ಅದರ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿಲ್ಲ.
ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ, ಶಿವಕುಮಾರ ಹೆಸರಲ್ಲಿ ಶಿವ ಹಾಗೂ ಷಣ್ಮುಗ ಇದ್ದಾರೆ. ಹರಿಪ್ರಸಾದ್ ಅವರ ಹೆಸರಲ್ಲಿ ಹರಿ ಇದ್ದಾನೆ. ಕೃಷ್ಣ ಭೈರೇಗೌಡರ ಹೆಸರಲ್ಲಿ ಕೃಷ್ಣ ಇದ್ದಾನೆ. ಹಿಂದೂ ಧರ್ಮ ನಿಮ್ಮ ಮನೆ ಆಸ್ತಿಯೇ? ಧರ್ಮ ಯಾವುದಾದರೂ ತತ್ವವೊಂದೆ. ನಾಮ ನೂರಾದರೂ ದೈವವೊಂದೆ. ಪೂಜೆ ನೂರಾದರೂ ಭಕ್ತಿವೊಂದೆ. ಕರ್ಮ ಹಲವಾದರೂ ನಿಷ್ಠೆವೊಂದೆ. ದೇವನೊಬ್ಬ ನಾಮ ಹಲವು. ನಾವು ಕಲ್ಲು, ನೀರು, ಮರ, ಗಾಳಿಯಲ್ಲಿ ದೇವರನ್ನು ಕಾಣುತ್ತೇವೆ.
ನಮ್ಮ ಸರ್ಕಾರದಲ್ಲಿ ಧಾರ್ಮಿಕ ದತ್ತಿ ಇಲಾಖೆ, ಹಜ್ ಸಮಿತಿ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಇದೆ. ಸಂವಿಧಾನದ ಪರವಾಗಿ ನಾವು ಎಲ್ಲಾ ಧರ್ಮಕ್ಕೂ ಆದ್ಯತೆ ನೀಡುತ್ತಾ ಬಂದಿದ್ದೇವೆ. ಎಲ್ಲರನ್ನೂ ಸಮಾನವಾಗಿ ಕಂಡು ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ಮೇಲೆ ಆಡಳಿತ ಮಾಡುತ್ತಿದ್ದೇವೆ. ನಿಮ್ಮ ಕೈಯಲ್ಲೂ ಅಧಿಕಾರ ಇತ್ತು. ಆಗ ಜನಪರ ಕಾರ್ಯಕ್ರಮ ಯಾಕೆ ಮಾಡಲಿಲ್ಲ? ಈಗ ಅಧಿಕಾರ ಹೋದ ನಂತರ ಸಂಕಟಪಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.