ಬೆಂಗಳೂರು: ಆರ್ಎಸ್ಎಸ್ಗೂ (RSS) ರಾಮಮಂದಿರಕ್ಕೂ (Ram Mandir) ಏನೂ ಸಂಬಂಧವಿಲ್ಲ. ಆದರೆ ಬಿಜೆಪಿ, ಆರ್ಎಸ್ಎಸ್ನವರನ್ನು ಬಳಸಿಕೊಂಡು ಮನೆ, ಮನೆಗೆ ತೆರಳಿ, ಅಕ್ಷತೆ ಕೊಟ್ಟು ಇಲ್ಲಿಂದಲೇ ರಾಮಮಂದಿರಕ್ಕೆ ನಮನ ಸಲ್ಲಿಸಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕಿಡಿಕಾರಿದ್ದಾರೆ.
ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ: ಪ್ರಧಾನಿ ಮೋದಿಯವರಿಗೆ ಮಾಜಿ ಸಿಎಂ HDK ಅಭಿನಂದನೆ!
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಭಾವನೆ ಮೇಲೆ ರಾಜಕಾರಣ ಮಾಡುತ್ತಿದ್ದರೆ, ನಾವು ಜನರ ಬದುಕಿನ ಬಗ್ಗೆ ರಾಜಕಾರಣ ಮಾಡುತ್ತಿದ್ದೇವೆ. ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರುವುದು ನಮ್ಮ ಉದ್ದೇಶ. ಪ್ರತಿಯೊಂದು ಕುಟುಂಬದ ಹೆಣ್ಣುಮಕ್ಕಳು ನಮ್ಮ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ನನ್ನ 40 ವರ್ಷಗಳ ರಾಜಕಾರಣದಲ್ಲಿ ಇಂತಹ ಅವಕಾಶ, ಭಾಗ್ಯ ದೊರಕಿರಲಿಲ್ಲ. ನುಡಿದಂತೆ ನಡೆದಿದ್ದೇವೆ, ಇದನ್ನು ಕಾರ್ಯಕರ್ತರು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಈ ದೇಶದ ಇತಿಹಾಸ, ಅಭಿವೃದ್ಧಿ ಪರ್ವ ಬರೆದದ್ದು ನಮ್ಮ ಹೆಗ್ಗಳಿಕೆ. ಅನ್ಯರು ಏನು ಬೇಕಾದರೂ ಹೇಳಬಹುದು, ಆದರೆ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ಅದನ್ನು ಅಭಿವೃದ್ದಿಯ ಪಥದಲ್ಲಿ ಕೊಂಡೊಯ್ದದ್ದು ಕಾಂಗ್ರೆಸ್. ನಿರ್ಲಕ್ಷಿತ ಸಮುದಾಯಕ್ಕೆ ಧ್ವನಿ, ವಿದ್ಯಾಭ್ಯಾಸ, ಆರ್ಥಿಕ ಶಕ್ತಿ ಕೊಟ್ಟದ್ದು, ಅಣೆಕಟ್ಟುಗಳ ನಿರ್ಮಾಣ ಸೇರಿದಂತೆ ದೇಶವನ್ನು ಅಭಿವೃದ್ದಿಶೀಲವನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ತಿಳಿಸಿದರು.