ಮಂಡ್ಯ:- ದೇವರನ್ನು ಮುಂದಿಟ್ಟು ಬಿಜೆಪಿ ರಾಜಕೀಯ ಮಾಡ್ತಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಶ್ರೀರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ರನ್ನೇ ಕರೆದಿಲ್ಲ. ಇದು ಕನ್ನಡಿಗರಿಗೆ ಮಾಡಿದ ಅಪಮಾನ ಅಲ್ವಾ ಎಂದರು.
ಸಚಿವ ಸಂಪುಟದ ಸದಸ್ಯರನ್ನೇ ಪ್ರಧಾನಿ ನರೇಂದ್ರ ಮೋದಿ ಕರೆದಿಲ್ಲ. ಅಪೂರ್ಣ ರಾಮಮಂದಿರ ಉದ್ಘಾಟನೆಗೆ ಅನೇಕ ಮಠಗಳು ವಿರೋಧಿಸಿವೆ. ಲೋಕಸಭೆ ಚುನಾವಣೆಗಾಗಿ ಶ್ರೀರಾಮಮಂದಿರ ಉದ್ಘಾಟಿಸುತ್ತಿದ್ದಾರೆ. ರಾಮಮಂದಿರ ಉದ್ಘಾಟನೆ ನಮಗೂ ಸಂತಸ, ನಾವು ರಾಮಭಕ್ತರೇ. ಚುನಾವಣೆ ದೃಷ್ಟಿಯಿಂದ ಉದ್ಘಾಟನೆ ಮಾಡುವುದು ಹೆಚ್ಚು ದಿನ ನಡೆಯಲ್ಲ. ದೇವರು, ದೇವಸ್ಥಾನ ಇಟ್ಟುಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇಂದ್ರದಲ್ಲಿ ರಜೆ ಘೋಷಣೆ ಮಾಡಿ, ಇಡೀ ದೇಶಕ್ಕೆ ರಜೆ ಕೊಡಿಸಲಿ. ಅಪರೂಪಕ್ಕೆ ಉತ್ತರಪ್ರದೇಶ ಸಿಎಂ ಯೋಗಿರನ್ನು ಪಕ್ಕಕ್ಕೆ ಕರೆದುಕೊಳ್ಳುತ್ತಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇಲ್ಲ, ಎಲ್ಲಾ ಮೋದಿಯವರೇ. ಮೋದಿಯ ದೊಡ್ಡ ಫೋಟೋಗಳು, ರಾಮನ ಚಿಕ್ಕ ಫೋಟೋ ಹಾಕಿದ್ದಾರೆ. ದೇವರನ್ನು ಮುಂದಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.