ಮಹಾರಾಷ್ಟ್ರ:- ಬಿಜೆಪಿ ಪಕ್ಷ ದೇಶದಲ್ಲಿ ವಸಾಹತುಶಾಹಿ ನೀತಿ ಪಾಲಿಸುತ್ತಿದ್ದು, ಪ್ರಜಾಪ್ರಭುತ್ವದ ತಳಹದಿಗೆ ಅಪಾಯಕಾರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮಹಾರಾಷ್ಟ್ರದ ಸಹಕಾರಿ ಮಹರ್ಷಿ ಭಾವುಸಾಹೇಬ್ ಥಾರೋಟ್ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ.ಅಣ್ಣಾಸಾಹೇಬ್ ಶಿಂಧೆ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಜಾತಂತ್ರ ವಿರೋಧಿ ಹಾಗೂ ಸಂವಿಧಾನವಿರೋಧಿ ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡಿದರೆ, ದೇಶ ಅಪಾಯಕ್ಕೆ ಸಿಲುಕಲಿದೆ. ಭಾರತವನ್ನು ಬ್ರಿಟೀಷರ ಕಪಿಮುಷ್ಟಿಯಿಂದ ಬಿಡಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ಸರ್ವಾಧಿಕಾರಿ ಮನೋಭಾವವಿರುವಂತಹ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷವನ್ನು ಉಳಿಸಿದರೆ, ದೇಶಕ್ಕೆ ಸಂವಿಧಾನಕ್ಕೆ ಧಕ್ಕೆ ಬರುತ್ತದೆ. ಆದ್ದರಿಂದ ಭಾರತದ ಸಂವಿಧಾನದ ಆಶಯದ ರಕ್ಷಣೆಯ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲಿದೆ ಎಂದರು.
ಕರ್ನಾಟಕದಲ್ಲಿ ಬಿಜೆಪಿಯ ಭ್ರಷ್ಟಾಚಾರ ಹಾಗೂ ವಚನಭ್ರಷ್ಟತೆ
ಬಿಜೆಪಿಯ ಜನವಿರೋಧಿ ನೀತಿಯನ್ನು ಕರ್ನಾಟಕದ ಮನೆಮನೆಗೂ ಕಾಂಗ್ರೆಸ್ ತಲುಪಿಸಿದ್ದರಿಂದ, ಬಿಜೆಪಿಯನ್ನು ರಾಜ್ಯದ ಅಧಿಕಾರದಿಂದ ಕಿತ್ತೊಗೆಯಲು ಸಾಧ್ಯವಾಯಿತು. ಕರ್ನಾಟಕದಲ್ಲಿ 40% ಕಮೀಷನ್ ನ ಭ್ರಷ್ಟಾಚಾರ ನಡೆಯಲು ಬಿಜೆಪಿ ಕಾರಣ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟಾಚಾರ ಹಾಗೂ ವಚನಭ್ರಷ್ಟತೆಯಿಂದ ಬೇಸತ್ತ ಕರ್ನಾಟಕದ ಜನ ಬಿಜೆಪಿಯನ್ನು ಕಿತ್ತೊಗೆದರು ಎಂದು ತಿಳಿಸಿದರು.
ಸಂವಿಧಾನದಲ್ಲಿ ನಂಬಿಕೆಯಿರುವವರು ಬಿಜೆಪಿಯನ್ನು ಕಿತ್ತೊಗೆಯಬೇಕು:-
ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಲಾಗಿದ್ದ ಗ್ಯಾರಂಟಿ ಭರವಸೆಗಳನ್ನು ತಪ್ಪದೇ ಈಡೇರಿಸಲಾಯಿತು. ಸಂವಿಧಾನದಲ್ಲಿ ನಂಬಿಕೆಯಿರುವವರೆಲ್ಲರೂ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಪ್ರಯತ್ನವನ್ನು ಕಾಂಗ್ರೆಸ್ ಸೇರಿದಂತೆ ಉಳಿದೆಲ್ಲ ಪಕ್ಷಗಳೂ ಮಾಡಬೇಕು ಎಂದರು.