ಹಾಸನ : ಡಿಕೆಶಿ ವಿಚಾರದಲ್ಲಿನ ಬೆಳವಣಿಗೆಗಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಆಡಳಿತ ಪಕ್ಷದಲ್ಲಿ ದಿನೇ ದಿನೇ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗುತ್ತಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ತಾವು ಮುಖ್ಯಮಂತ್ರಿ ಆಗಬೇಕು ಅಂತ ಅನೇಕರು ಕಾಯ್ತಾ ಇದ್ದಾರೆ. ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಆಗೋದು ಇದೆ. ಆ ಮುನ್ಸೂಚನೆಗಳನ್ನು ನೀವು ನೋಡುತ್ತಿದ್ದೀರಿ. ಡಿಕೆಶಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಅವರನ್ನು ಪ್ರಶ್ನೆ ಮಾಡಿ ಎಂದರು.
ಇನ್ನೂ ಪ್ರಯಾಗ್ರಾಜ್ನಲ್ಲಿ ಕುಂಭಮೇಳಕ್ಕೆ ಕಾಂಗ್ರೆಸ್ನವರು ತಕರಾರು ಎತ್ತಿದ್ರು. ಇದರ ಮಧ್ಯೆ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ಕುಂಭಮೇಳಕ್ಕೆ ಹೋಗಿ ಬಂದಿದ್ದಾರೆ. ನಮ್ಮ ಪ್ರಾಚೀನತೆ ಆಧಾರದ ಮೇಲೆ ಹೋಗಿ ಬಂದಿದ್ದಾರೆ. ಬಿಜೆಪಿಗೂ ಆ ಬೆಳವಣಿಗೆಗೂ ಯಾವುದೇ ಸಂಬಂಧವಿಲ್ಲ. ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವರ ಜೊತೆ ಅವರು ಭಾಗವಹಿಸಿದ್ದರು. ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಶಿವರಾತ್ರಿ ಸಂದರ್ಭದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೂ ರಾಜಕೀಯ ಧ್ರುವೀಕರಣ, ಡಿ.ಕೆ.ಶಿವಕುಮಾರ್ ಬಿಜೆಪಿಗೆ ಬಂದು ಬಿಡ್ತಾರೆ ಈ ರೀತಿಯ ಗುಸು, ಗುಸು ಶುರುವಾಗಿದೆ. ಇದರಲ್ಲಿ ಯಾವುದರಲ್ಲಿ ಅರ್ಥವಿಲ್ಲ ಎಂದರು.
ಇನ್ನೂ ನಾಡಿನ ಜನರ ಅಪೇಕ್ಷೆಗೆ ತಕ್ಕಂತೆ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಬೇಕು. ನಾವು ಮುಖ್ಯಮಂತ್ರಿಗಳಿಗೆ ಬಹಿರಂಗವಾಗಿ ಪತ್ರ ಬರೆದಿದ್ದೇನೆ. ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿರುವ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಹಾಗಾಗಿ ಜನರ ಅಪೇಕ್ಷನು ಕೂಡ ಸಾಕಾಷ್ಟಿದೆ. ಗ್ಯಾರೆಂಟಿಗಳೇ ಅಭಿವೃದ್ಧಿ ಆಗಿಬಿಟ್ಟರೆ ಶಾಸಕರುಗಳು ತಲೆ ಎತ್ತಿಕೊಂಡು ಓಡಾಡಲು ಸಾಧ್ಯವಿಲ್ಲ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಬಜೆಟ್ ಮಂಡನೆ ಮಾಡ್ತಾರೆ ಎಂಬ ಆಶಾಭಾವನೆಯಲ್ಲಿ ನಾವು ಕೂಡ ಇದ್ದೇವೆ ಎಂದರು.
ಇನ್ನೂ ಮಾಜಿಸಚಿವ ರೇಣುಕಾಚಾರ್ಯ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ, ಇತ್ತೀಚಿಗೆ ಕೆಲವರು ಯಡಿಯೂರಪ್ಪ ಹಾಗೂ ನನ್ನ ವಿರುದ್ಧ ಕೆಲವರು ಸಮಾಜ ಮುಖಂಡರೆಂದು ಸಭೆ ಕರೆದಿದ್ದರು. ಅದರಲ್ಲಿ ಕೆಲವು ಪ್ರಮುಖರನ್ನು ಬಿಟ್ಟರೆ ಉಳಿದವರು ಯಾರು ಅಂಥ ಅವರ ಬೀದಿ, ಕೇರಿಯಲ್ಲೂ ಗೊತ್ತಿಲ್ಲ. ಈ ವಿಚಾರವನ್ನು ಇಟ್ಟುಕೊಂಡು ನಾವು ಸಮಾಜದ ಮುಖಂಡರ ಸಭೆ ಕರೆಯುವುದು ಕಂಡಿತ ಸರಿಯಲ್ಲ. ಅವರು ಮಾಡ್ತಾರೆ ಅಂಥ ನಾವು ಮಾಡಿದ್ರೆ ನೋ ಎಂಡ್. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಇಂತಹ ಸಭೆಗಳಿಗೆ ನೇರವಾಗಿ, ಪರೋಕ್ಷವಾಗಿ ಬೆಂಬಲ ಇಲ್ಲ ಎಂದರು.