ಹುಬ್ಬಳ್ಳಿ:- ಬಿಜೆಪಿ ಕಾಂಗ್ರೆಸ್ ಸರ್ಕಾರ ಬೀಳುತ್ತೇ ಎಂಬ ಭ್ರಮೆಯಲ್ಲಿ ಇದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ನೈತಿಕತೆ ಇಲ್ಲ. ಅವರು ಇಂದಿಗೂ ಸರ್ಕಾರ ಬೀಳುತ್ತದೆ ಎಂಬ ಭ್ರಮೆಯಲ್ಲಿದ್ದಾರೆ ಎಂದರು.
ಬಿಜೆಪಿ 40 ಪರ್ಸೆಂಟ್ ಸರ್ಕಾರ ಎಂಬ ಕಾರಣದಿಂದ ಅಧಿಕಾರ ಕಳೆದುಕೊಂಡಿತು. ನಾವು ಭ್ರಷ್ಟಾಚಾರ ಮಾಡಿಲ್ಲ ಅಂತ ಸಾಬೀತುಪಡಿಸಲು ಅವರಿಗೆ ಆಗಲಿಲ್ಲ. ಚುನಾವಣೆಯಲ್ಲಿ ಬಿಜೆಪಿಯವರು ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಾರಲ್ಲ, ಅವರೇನು ಸತ್ಯ ಹರಿಶ್ಚಂದ್ರರಾ? ಆ ದುಡ್ಡು ಎಲ್ಲಿಂದ ಬರುತ್ತೆ ತಿಳಿಸಲಿ ಎಂದರು.
ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಇರುವುದಿಲ್ಲವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಅಧಿಕಾರ ಕಳೆದುಕೊಂಡ ಮೇಲೆ ಸಹಿಸಿಕೊಳ್ಳಲು ಆಗುತ್ತಿಲ್ಲ. 130 ಸ್ಥಾನಗಳಲ್ಲಿ ಬರುತ್ತೇವೆ ಅಂತ 60 ಸ್ಥಾನಕ್ಕೆ ಇಳಿದರು. ಅವರೀಗ ನೀರಿನಿಂದ ಹೊರ ಬಿದ್ದ ಮೀನಿನಂತಾಗಿದ್ದಾರೆ. ಮೊದಲು ಬಿಜೆಪಿಯವರು ತಮ್ಮ ಮನೆಯನ್ನು ಸರಿಪಡಿಸಿಕೊಳ್ಳಲಿ ಎಂದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ‘ಜೈ ಶ್ರೀರಾಮ್’ ಘೋಷಣೆ ಕುರಿತು ಪ್ರತಿಕ್ರಿಯಿಸಿ, ಅದಕ್ಕೇ ರಾಜಕಾರಣ ಎನ್ನುವುದು. ಈ ರಾಜಕಾರಣದಲ್ಲಿ ಯಾವಾಗ ಏನಾಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಪರಿವರ್ತನೆಯಾಗಿದ್ದಾರೆ ಎಂದು ಲೇವಡಿ ಮಾಡಿದರು.