ಬಾಲಿವುಡ್ ನಟಿ ಕಂಗನಾ ರಣಾವತ್ ಇತ್ತೀಚೆಗೆ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಆ ಬಳಿಕ ಕಾಂಗ್ರೆಸ್ ಪಕ್ಷದ ವಿರುದ್ಧ ಪದೇ ಪದೇ ಗುಡುಗಲು ಆರಂಭಿಸಿದ್ದಾರೆ. ಇಷ್ಟು ದಿನ ಬಾಲಿವುಡ್ ನಟ,ನಟಿಯರನ್ನು ಟೀಕಿಸುತ್ತಿದ್ದ ನಟಿ ಇದೀಗ ಕಾಂಗ್ರೆಸ್ ಪಕ್ಷದವರ ಹಿಂದೆ ಬಿದ್ದಿದ್ದಾರೆ.
ಕಂಗನಾ ರಣಾವತ್ ಅವರಿಗೆ ನೆಪೋಟಿಸಂ ಎಂದರೆ ಆಗುವುದಿಲ್ಲ. ಅವಕಾಶಗಳು ಕೇವಲ ವಂಶ ಪಾರಂಪರ್ಯವಾಗಿ ಸಿಗುವುದನ್ನು ಅವರು ವಿರೋಧಿಸುತ್ತಾ ಬಂದಿದ್ದಾರೆ. ಈಗ ಅವರು ರಾಹುಲ್ ಗಾಂಧಿ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ. ರಾಹುಲ್ ಗಾಂಧಿಯನ್ನು ನೆಪೋಟಿಸಂ ಮಗು ಎಂದು ಕಂಗನಾ ಟೀಕಿಸಿದ್ದಾರೆ.
ಸಂದರ್ಶನದಲ್ಲಿ ಭಾಗಿಯಾಗಿದ್ದ ಕಂಗನಾ ರಣಾವತ್ ಈ ವಿಚಾರ ಮಾತನಾಡಿದ್ದಾರೆ. ‘ನನ್ನ ಪಾಲಿಗೆ ಕಾಂಗ್ರೆಸ್ ಯಾವಾಗಲೂ ಕೆಟ್ಟ ಪಕ್ಷ ಆಗಿತ್ತು. ಆ ಪಕ್ಷದಲ್ಲಿ ಇರುವ ನೆಪೋಟಿಸಂ ನನಗೆ ಬಹಳ ತೊಂದರೆ ಎನಿಸುತ್ತಿತ್ತು. ಯಾಕೆಂದರೆ ಚಿತ್ರರಂಗದಲ್ಲಿ ನೆಪೋಟಿಸಂ ಕಾರಣದಿಂದಲೇ ನಾನು ಟಾರ್ಗೆಟ್ ಆಗಿದ್ದೆ. ಅದನ್ನು ನಾನು ನೇರವಾಗಿಯೇ ವಿರೋಧಿಸಿದೆ. ಅದು ನನ್ನನ್ನು ಶೋಷಣೆ ಮಾಡುತ್ತಿತ್ತು. ನೆಪೋಟಿಸಂ, ಗುಂಪುಗಾರಿಕೆ, ವಂಶ ಪಾರಂಪರ್ಯ ರಾಜಕೀಯ. ಈ ಕಾರಣದಿಂದಲೇ ನಾನು ಕಾಂಗ್ರೆಸ್ ಪಕ್ಷವನ್ನು ಇಷ್ಟಪಡುವುದಿಲ್ಲ’ ಎಂದು ಕಂಗನಾ ಹೇಳಿದ್ದಾರೆ.
ಸೋನಿಯಾ ಗಾಂಧಿ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ಒಂದೇ ಪದದಲ್ಲಿ ವಿವರಿಸಿ ಎಂದು ಕೇಳಿದ್ದಕ್ಕೆ, ‘ನೆಪೋಟಿಸಂ ಮಕ್ಕಳು’ ಎಂದು ಕಂಗನಾ ರಣಾವತ್ ಹೇಳಿದ್ದಾರೆ. ‘ಅವರು ಮಂಗಳ ಗ್ರಹದಿಂದ ಬಂದಿದ್ದಾರೆ ಎಂಬಷ್ಟು ವಿಚಿತ್ರವಾಗಿದ್ದಾರೆ’ ಎಂದು ಟೀಕೆ ಮಾಡಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಕಂಗನಾ ರಣಾವತ್ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಮೊದಲಿನಿಂದಲೂ ಕಂಗನಾ ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು. ಅನೇಕ ಬಾರಿ ಯೋಗಿ ಆದಿತ್ಯನಾಥ್ ಅವರನ್ನು ಕಂಗನಾ ಭೇಟಿ ಆಗಿದ್ದರು. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡೆಯನ್ನು ಅವರು ಯಾವಾಗಲೂ ಬೆಂಬಲಿಸುತ್ತಲೇ ಬಂದಿದ್ದರು. ಈಗ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ.