ಗದಗ: ಶನಿವಾರ ಗದಗ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳು ಹಾಗೂ ಇತರ ಕ್ಷೇತ್ರಗಳ ಪ್ರಮುಖರೊಂದಿಗೆ ನಡೆಯುವ ಜನತಾ ಸಂವಾದ ಸದನದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಎಪಿಎಂಸಿಯ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಜನತಾ ಸಂವಾದ ಸದನ ನಡೆಯಲಿದ್ದು ನಮ್ಮ ಕ್ಷೇತ್ರದ ಅಭಿವೃದ್ಧಿ ಮತ್ತು ಸಮಸ್ಯೆಗಳ ಬಗೆಗೆ ಬೆಳಕು ಚೆಲ್ಲುವ ಉದ್ದೇಶವನ್ನಿಟ್ಟುಕೊಂಡು ದೇಶದಲ್ಲೇ ಮೊಟ್ಟಮೊದಲು ಎಂಬಂತೆ ಹಮ್ಮಿಕೊಂಡಿರುವ ಜನತಾ ಸಂವಾದ ಸದನದಲ್ಲಿ ಜಿಲ್ಲೆ ಎಲ್ಲ ಸಂಘ, ಸಂಸ್ಥೆ ಸೇರಿದಂತೆ ಕ್ಷೇತ್ರದ ಜನರು ಪಾಲ್ಗೊಳಬೇಕೆಂದು ವಿನಂತಿಸಿದ್ದಾರೆ.
ಈ ಸಂವಾದದಲ್ಲಿ ಕ್ಷೇತ್ರದ ಸಮಸ್ಯೆಗಳ ಬಗೆಗೆ ಗಮನ ಸೆಳೆದು ಪರಿಹಾರ ಕಂಡುಕೊಳ್ಳಲು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸಿ.ಸಿ.ಪಾಟೀಲ ಸೇರಿದಂತೆ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಅವರ ಜೊತೆ ನೇರವಾಗಿ ಸಂವಾದದಲ್ಲಿ ತಾವು ಭಾಗಿಯಾಗಬಹುದು.
ಕ್ಷೇತ್ರದ ಜ್ವಲಂತ ಸಮಸ್ಯೆಗಳು, ಮೂಲಭೂತ ಸೌಕರ್ಯ, ಕ್ರೀಡೆ, ಉದ್ಯೋಗ, ಶಿಕ್ಷಣ, ಸರಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಸಾರ್ವಜನಿಕ ಸಮಸ್ಯೆಗಳನ್ನು ಸಂವಾದದಲ್ಲಿ ಪ್ರಶ್ನೆ ಮಾಡುವ ಮೂಲಕ ಅವುಗಳಿಗೆ ಪರಿಹಾರ ಪಡೆದುಕೊಳ್ಳುವ, ಕ್ಷೇತ್ರದ ಅಭಿವೃದ್ಧಿ ಪರ ಚಿಂತನೆ ಅದ್ಭುತ ಅವಕಾಶ ಜನತಾ ಸಂವಾದ ಸದನದ್ದಾಗಿದೆ. ಪಕ್ಷಾತೀಯವಾಗಿ, ಜಾತ್ಯಾತೀತವಾಗಿ, ಲಿಂಗಬೇದವಿಲ್ಲದೆ ಜನತಾ ಸಂವಾದ ಸದನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜಾತ್ಯಾತೀತ, ಪಕ್ಷಾತೀತ, ಲಿಂಗಭೇದವಿಲ್ಲದ, ಸ್ವಾರ್ಥರಹಿತ ಚಿಂತನೆಯ ನಡೆಯಲ್ಲಿ ಗದಗ ಜಿಲ್ಲೆಯ ಎಲ್ಲ ಸಂಘ, ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಆತ್ಮೀಯರು, ಹಿತೈಷಿಗಳು, ಬಂಧುಗಳು, ಪ್ರೇರಣೆಯ ವ್ಯಕ್ತಿ ಶಕ್ತಿಗಳು, ಮಹಿಳಾ ಸಂಘಟನೆಗಳು, ಸಮಾಜಮುಖಿ ಚಿಂತಕರು ಸೇರಿದಂತೆ ಅವರಿವರೆನ್ನದೆ ಪ್ರತಿಯೊಬ್ಬರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.