ಬೀದರ್: ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಗೆ ಹಿಂದುಗಡೆಯಿಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ವಸತಿ ನಿಲಯ ಮೇಲ್ವಿಚಾರಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೀದರ್ ತಾಲೂಕಿನ ಹೊನ್ನಿಕೇರಿ ಕ್ರಾಸ್ ಬಳಿ ನಿನ್ನೆ ಸಂಜೆ ನಡೆದಿದೆ. ಅಪಘಾತದಲ್ಲಿ ಸಾವನಪ್ಪಿದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವಾರ್ಡನ್ ದೇಸುರಾವ ರಾಠೋಡ್ (40) ಮೂಲತಃ ಚಿಂಚೋಳಿ ತಾಲೂಕಿನವರಾಗಿದ್ದು ಕರ್ತವ್ಯ ನಿಮಿತ್ತ ಬೀದರ್ ನಲ್ಲಿ ನೆಲೆಸಿದ್ದರು..
ಕರ್ತವ್ಯ ಮುಗಿಸಿಕೊಂಡು ಭಾಲ್ಕಿಯಿಂದ ಬೀದರ್ ನಗರಕ್ಕೆ ಹೋಗುವ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಮೃತ ಭಾಲ್ಕಿ ತಾಲೂಕಿನ ಲಖನಗಾಂವ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವಾರ್ಡನ್ ಹಾಗೂ ಭಾಲ್ಕಿ ಪಟ್ಟಣದ ವಸತಿ ನಿಲಯದ ಪ್ರಭಾರಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.