ಸಂಕ್ರಾಂತಿ ಸಂಭ್ರಮಕ್ಕೆ ನೋ ಎಲಿಮಿನೇಷನ್ ಸಿಹಿ ಕೊಟ್ಟಿರುವ ಬಿಗ್ಬಾಸ್, ಹೊಸ ವಾರಕ್ಕೆ ಸ್ಪರ್ಧಿಗಳಿಗೆ ಹೊಸ ಹೊಸ ಟಾಸ್ಕ್ಗಳನ್ನು ನೀಡುತ್ತಿದ್ದಾರೆ. ಸದಸ್ಯರ ನಡುವಿನ ಸ್ಪರ್ಧೆಯ ತುರುಸನ್ನು ಹೆಚ್ಚಿಸುವ ಬೆಂಕಿ ಚಟುವಟಿಕೆಯೊಂದು ಮನೆಯೊಳಗೆ ನಡೆದಿದೆ. JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಅದರ ಝಲಕ್ ಜಾಹೀರಾಗಿದೆ.
‘ಈ ವಾರದ ನಾಮಿನೇಷನ್ನಲ್ಲಿ ನಿಮ್ಮೊಳಗಿರುವ ಗೆಲುವಿನ ಕಿಚ್ಚಿಗೆ ಇಬ್ಬರುಸದಸ್ಯರು ಬಲಿಯಾಗಬೇಕು’ ಎಂದು ಹೇಳಿದ್ದಾರೆ.
ಎದುರಿಗೆ ಧಗದಹಿಸಿ ಉರಿಯುತ್ತಿರುವ ಬೆಂಕಿಗೆ ತಾವು ಇಚ್ಛಿಸಿರುವ ಇಬ್ಬರು ಸದಸ್ಯರ ಫೊಟೊಗಳನ್ನು ಹಾಕಬೇಕು. ಮನೆಯೊಳಗೇ ರೂಪುಗೊಂಡಿರುವ ಬಾಂಧವ್ಯವೆಲ್ಲವೂ ಈ ಬೆಂಕಿಯಲ್ಲಿ ಹಾದು ಬಣ್ಣ ಬದಲಿಸಿಕೊಳ್ಳುತ್ತಿವೆ. ಕೆಲವು ಉರಿದು ಬೂದಿಯಾಗುತ್ತಿವೆ. ಕೆಲವು ಕರಕಲಾಗುತ್ತಿವೆ. ಯಾವುದಾದರೂ ಬೆಂಕಿಯಲ್ಲಿ ಬೆಂದು ಅಪ್ಪಟ ಚಿನ್ನವಾಗಿ ಹೊರಬರಲಿವೆಯೇ ಎಂದು ಕಾದು ನೋಡಬೇಕಿದೆ.
ಸಂಗೀತಾ, ಪ್ರತಾಪ್ ಅವರ ಫೋಟೊವನ್ನು ಬೆಂಕಿಗೆ ಎಸೆದಿದ್ದಾರೆ. ‘ನಾನು ಇದುವರೆಗೆ ನೋಡಿರುವ ಪ್ರತಾಪ್ ಬೇರೆಯೇ, ಈಗ ನೋಡ್ತಿರೋ ಪ್ರತಾಪ್ ಬೇರೆಯೇ. ಹಾಗಾಗಿ ಅವರನ್ನು ನಾಮಿನೇಟ್ ಮಾಡುತ್ತೇನೆ’ ಎಂದು ಸಂಗೀತಾ ವಿವರಣೆ ನೀಡಿದ್ದಾರೆ. ತುಕಾಲಿ ಸಂತೋಷ್ ಮತ್ತು ತನಿಷಾ ಇಬ್ಬರೂ ಕಾರ್ತಿಕ್ ಅವರನ್ನು ನಾಮಿನೇಟ್ ಮಾಡಿದ್ದಾರೆ.
ತನಿಷಾ, ಪ್ರತಾಪ್ ಫೋಟೊವನ್ನು ಹರಿದು ಬೆಂಕಿಗೆ ಎಸೆದಿದ್ದಾರೆ. ಜೊತೆಗೆ, ‘ಹೇಳುವಂಥ ಮಾತು ಉಳಿಸಿಕೊಳ್ಳಕ್ಕಾಗಲ್ಲ. ಹಾರ್ಟಿಗೆ ಚುಚ್ಚಿದ್ರೆ ನಾನು ಡೈರೆಕ್ಟ್ ಬೆಂಕಿಗೇ ಹಾಕ್ತೀನಿ. ಸುಟ್ಟು ಪುಡಿಪುಡಿಯಾಗಿ, ಬೂದಿನೂ ಸಿಗದಿರುವಷ್ಟು ಕ್ರೂರ ಆಗಿಬಿಡ್ತೀನಿ’ ಎಂದು ಖಡಕ್ಕಾಗಿ ಹೇಳಿದ್ದಾರೆ.
ಬಿಗ್ಬಾಸ್ ಷೋ ಅಂತಿಮ ಹಂತದಲ್ಲಿನ ಈ ಸಂದರ್ಭದಲ್ಲಿ ಮನೆಯೊಳಗಿನ ಸದಸ್ಯರ ನಡುವಿನ ಸ್ಪರ್ಧೆಯೂ ಅಷ್ಟೇ ತುರುಸಿನದಾಗಿರುತ್ತದೆ. ಕಳೆದ ವಾರ ಬೆಸ್ಟ್ ಪರ್ಫಾರ್ಮೆನ್ಸ್ ನೀಡಿದ್ದ ಸ್ಪರ್ಧಿಗಳೆಲ್ಲ ಈ ವಾರ ಅದನ್ನು ಮುಂದುವರಿಸುತ್ತಾರಾ? ಕಾದು ನೋಡಬೇಕು.