ಹಾಸನ: ಕೌಟುಂಬಿಕ ಕಲಹ ಹಿನ್ನೆಲೆ ತಾಯಿ ಮಗ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅತ್ತೆ-ಸೊಸೆ ನಡುವಿನ ಹೊಂದಾಣಿಕೆ ಕಾರಣ ಅಲ್ಲ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಮೃತ ಭರತ್ ಹೆಚ್ಐವಿ ಸೋಂಕಿತನಾಗಿದ್ದ ಎಂಬ ಸತ್ಯವನ್ನು ಆತನ ಪತ್ನಿ ಕುಟುಂಬದವರು ಇದೀಗ ಬಹಿರಂಗಪಡಿಸಿದ್ದಾರೆ.
ಪತ್ನಿ ಕುಟುಂಬಸ್ಥರು ಭರತ್ಗೆ 8 ತಿಂಗಳ ಹಿಂದೆ ನಾಲ್ಕು ಲಕ್ಷ ಹಣ, 100 ಗ್ರಾಂ ಚಿನ್ನ ನೀಡಿ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ಭರತ್ ಮೂರು ವರ್ಷಗಳ ಹಿಂದಿನಿಂದಲೇ ಹೆಚ್ಐವಿ ಸೋಂಕಿತನಾಗಿದ್ದ.
ಮಾರಣಾಂತಿಕ ಕಾಯಿಲೆ ಸೋಂಕು ತಗುಲಿರುವುದನ್ನು ಮುಚ್ಚಿಟ್ಟು ಮದುವೆಯಾಗಿದ್ದ ಭರತ್, ಮದುವೆಯಾದ ಹದಿನೈದು ದಿನ ಮಾತ್ರ ಪತ್ನಿ ಜೊತೆ ಸಂಸಾರ ಮಾಡಿದ್ದ. ಬಳಿಕ ಪತ್ನಿಯಿಂದ ಅಂತರ ಕಾಯ್ದುಕೊಂಡಿದ್ದ. ಅಲ್ಲದೇ ಈ ವಿಚಾರವನ್ನು ಪತ್ನಿಯಿಂದ ಮುಚ್ಚಿಟ್ಟು ಕಾಯಿಲೆಗೆ ಮಾತ್ರೆ ತೆಗೆದುಕೊಳ್ಳುತ್ತಿದ್ದ.
Black water: ಬ್ಲ್ಯಾಕ್ ವಾಟರ್ ಎಂದರೇನು..? ಸೆಲೆಬ್ರಿಟಿಗಳು ಯಾಕೆ ಇದನ್ನು ಜಾಸ್ತಿ ಕುಡಿಯುತ್ತಾರೆ ಗೊತ್ತಾ.?
ತನ್ನ ಹುಳುಕು ಮುಚ್ಚಿಕೊಳ್ಳಲು ಪಂಚಾಯ್ತಿ ಸೇರಿಸಿ ನನ್ನ ಪತ್ನಿ ಹೆಣ್ಣೇ ಅಲ್ಲ, ಮದ್ಯಪಾನ ಮಾಡುತ್ತಾಳೆ, ಮಾದಕ ವಸ್ತು ತೆಗೆದುಕೊಳ್ಳುತ್ತಾಳೆ ಎಂದು ಭರತ್ ಸುಳ್ಳು ಆರೋಪ ಮಾಡಿದ್ದ. ಕೆಲವು ದಿನಗಳ ಕಾಲ ಸಂಬಂಧಿಕರ ಮನೆಯಲ್ಲಿ ಕೂಡ ಪತ್ನಿಯನ್ನು ಉಳಿಸಿದ್ದ. ಭರತ್ ವಂಚನೆ ತಿಳಿಯದೇ ಮತ್ತೊಂದು ಪಂಚಾಯ್ತಿ ನಡೆಸಿ ಪತ್ನಿ ಕುಟುಂಬಸ್ಥರು ಆಕೆಗೆ ಬುದ್ಧಿವಾದ ಹೇಳಿ ಗಂಡನ ಮನೆಗೆ ಕಳುಹಿಸಿದ್ದರು. ಆದರೆ ಭರತ್ ತನ್ನ ಪತ್ನಿ ತಪ್ಪು ಮಾಡದೇ ಇದ್ದರೂ ಮತ್ತೆ ತವರು ಮನೆಗೆ ಕಳುಹಿಸಿದ್ದ.
ಭರತ್ ಹೆಚ್ಐವಿ ರೋಗಕ್ಕೆ ತೆಗೆದುಕೊಳ್ಳುವ ಮಾತ್ರೆ ಡಬ್ಬಿಯನ್ನು ಸದಾ ಕೊರಳಿಗೆ ಕಟ್ಟಿಕೊಂಡು ತಿರುಗುತ್ತಿದ್ದ. ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದು ಹಾಗೂ ಮಾತ್ರೆ ತೆಗೆದುಕೊಳ್ಳುವ ಬಗ್ಗೆ ಅನುಮಾನ ಪಟ್ಟ ಪತ್ನಿ, ಭರತ್ ಸ್ನಾನಕ್ಕೆ ಹೋಗಿದ್ದಾಗ ಮಾತ್ರೆಯ ಫೋಟೋ ತೆಗೆದು ತನ್ನ ಅಕ್ಕನಿಗೆ ಕಳುಹಿಸಿದ್ದಳು. ಆಕೆಯ ಸಹೋದರಿ ಮಾತ್ರೆಯ ಫೋಟೋಗಳನ್ನು ತನಗೆ ಪರಿಚಯ ಇರುವ ನರ್ಸ್ಗೆ ಕಳುಹಿಸಿದ್ದರು. ಇದನ್ನು ಪರಿಶೀಲಿಸಿದ ನರ್ಸ್ ಇದು ಹೆಚ್ಐವಿ ಸೋಂಕಿತರು ತೆಗೆದುಕೊಳ್ಳುವ ಮಾತ್ರೆ ಎಂದು ತಿಳಿಸಿದ್ದಾರೆ. ಇದರಿಂದ ಭರತ್ ಹೆಚ್ಐವಿ ಸೋಂಕಿತ ಎಂದು ಪತ್ನಿ ಕುಟುಂಬಸ್ಥರು ಅನುಮಾನಗೊಂಡಿದ್ದಾರೆ.
ಬಳಿಕ ಎರಡೂ ಕಡೆಯ ಕುಟುಂಬಸ್ಥರಿಂದ ಮತ್ತೊಂದು ರಾಜಿ ಪಂಚಾಯ್ತಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಭರತ್ ಆಧಾರ್ ಕಾರ್ಡ್ ತರಬೇಕು. ಇಬ್ಬರೂ ಮೆಡಿಕಲ್ ಟೆಸ್ಟ್ಗೆ ಒಳಪಡಬೇಕು ಎಂದು ನಿರ್ಧಾರ ಮಾಡಿ ಸೋಮವಾರ ಮೆಡಿಕಲ್ ಟೆಸ್ಟ್ಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಭರತ್ ಆಧಾರ್ ಕಾರ್ಡ್ ಕೊಡದೇ ಸತಾಯಿಸಿದ್ದ. ಪಂಚಾಯ್ತಿ ನಡೆದರೆ ತಾನು ಮುಚಿಟ್ಟಿದ್ದ ಎಲ್ಲಾ ಸತ್ಯ ಬಯಲಾಗಲಿದೆ ಎಂಭ ಭಯದಿಂದ ಭರತ್ ಮಾ.9 ರಂದು ರಾತ್ರಿ ಬೆಂಗಳೂರಿನಿಂದ ತಾಯಿ ಜೊತೆ ದಿಡಿಗದ ಸಂಬಂಧಿಕರ ಮನೆಗೆ ಬಂದಿದ್ದ.
ಬಳಿಕ ಸಂಬಂಧಿಕರಿಂದ ಬೈಕ್ ಪಡೆದು ಕಬ್ಬಳಿ ಮನೆಗೆ ಬಂದು ಅಲ್ಲಿಂದ ನೆರಲೆಕೆರೆ ಗ್ರಾಮದಲ್ಲಿರುವ ಅಜ್ಜಿ ಮನೆಗೆ ತಾಯಿ ಮಗ ತೆರಳಿದ್ದರು. 100 ಗ್ರಾಂ ಒಡವೆ, 30 ಗ್ರಾಂ ಚೈನು ಎಲ್ಲವನ್ನೂ ಅಜ್ಜಿಗೆ ಕೊಟ್ಟು ಅವರ ಆಶೀರ್ವಾದ ಪಡೆದು ಭರತ್ ಹಾಗೂ ತಾಯಿ ಮರಳಿ ಗ್ರಾಮಕ್ಕೆ ಬಂದಿದ್ದರು. ಮಾ.10ರ ಮುಂಜಾನೆ 3:15 ರಿಂದ 4 ಗಂಟೆ ನಡುವೆ ಗ್ರಾಮದ ನೀರಿನ ಕಟ್ಟೆಗೆ ಬಿದ್ದು ತಾಯಿ-ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಭರತ್ ತಾಯಿ ಜಯಂತಿ ಗ್ರಾಮದ ದೇವರಿಗೆ ಕೈಮುಗಿದು ಹೋಗಿದ್ದರು.
ಭರತ್ ತಾಯಿ ಜಯಂತಿ ಅವರಿಗೆ ಸೇರಿದ್ದ 150 ತೆಂಗಿನ ಮರ, 2 ಎಕರೆ ಹೊಲ ಮತ್ತು 1 ಮನೆ ಮತ್ತು ಆಸ್ತಿ ಲಪಟಾಯಿಸಲು ಜಯಂತಿ ಸಂಬಂಧಿಕರಿಂದ ಭರತ್ ಪತ್ನಿ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಪತ್ನಿ ಕುಟುಂಬಸ್ಥರು ತಿಳಿಸಿದ್ದು, ಭರತ್ನಿಂದ ಮಗಳ ಬಾಳು ಹಾಳಾಗಿದೆ ಎಂದು ಕಣ್ಣೀರಿಡುತ್ತಿದ್ದಾರೆ. ಸದ್ಯ ಭರತ್ ಪತ್ನಿಯನ್ನು ಆಕೆಯ ಕುಟುಂಬಸ್ಥರು ಹೆಚ್ಐವಿ ಪರೀಕ್ಷೆಗೆ ಒಳಪಡಿಸಿದ್ದು, ನೆಗೆಟಿವ್ ರಿಪೋರ್ಟ್ ಬಂದಿದೆ. ಆದರೆ ಭರತ್ ಪತ್ನಿಯ ಮಾನಸಿಕ ಕಿರುಕುಳ, ಹಠಮಾರಿತನದಿಂದ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಾಯಿ ಜಯಂತಿ ಸಂಬಂಧಿಕರು ಬಿಂಬಿಸಿದ್ದಾರೆ. ತಾಯಿ-ಮಗನ ಸಾವಿಗೆ ನಮ್ಮ ಮಗಳು ಕಾರಣಳಲ್ಲ ಎಂದು ಕುಟುಂಬಸ್ಥರು ಸ್ಪಷ್ಟನೆ ನೀಡಿದ್ದಾರೆ.