ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಸಿನಿಮಾದ ಮೇಲೆ ರಾಮ್ ಚರಣ್ ಮತ್ತು ತಂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು ಈ ಮಧ್ಯೆ ಚಿತ್ರತಂಡಕ್ಕೆ ಸಮಸ್ಯೆಯೊಂದು ಎದುರಾಗಿದೆ.
ಬಹುನಿರೀಕ್ಷಿತ ಗೇಮ್ ಚೇಂಜರ್ ಸಿನಿಮಾ ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆಗೆ ಅಡೆ-ತಡೆ ಉಂಟಾಗಲು ಸಿನಿಮಾದ ನಿರ್ದೇಶಕ ಶಂಕರ್ ಕಾರಣ ಎನ್ನಲಾಗುತ್ತಿದೆ. ಶಂಕರ್ ನಿರ್ದೇಶನ ಮಾಡಿದ್ದ ‘ಇಂಡಿಯನ್ 2’ ಸಿನಿಮಾದ ನಿರ್ಮಾಣ ಸಂಸ್ಥೆಯಾಗಿರುವ ಲೈಕಾ, ‘ಗೇಮ್ ಚೇಂಜರ್’ ಸಿನಿಮಾವನ್ನು ತಮಿಳು ನಾಡಿನಲ್ಲಿ ಬಿಡುಗಡೆ ಮಾಡಬಾರದು ಎಂದು ನಿರ್ಮಾಪಕರ ಕೌನ್ಸಿಲ್ಗೆ ದೂರು ನೀಡಿತ್ತು. ಶಂಕರ್, ಲೈಕಾ ನಿರ್ಮಾಣ ಸಂಸ್ಥೆಯ ಜೊತೆ ಮಾಡಿಕೊಂಡಿದ್ದ ಒಪ್ಪಂದ ಉಲ್ಲಂಘನೆ ಮಾಡಿದ್ದು, ನಿಯಮದಂತೆ ನಮಗೆ ನೀಡಿರುವ ಭರವಸೆಯಂತೆ ನಡೆದುಕೊಳ್ಳುವವರೆಗೆ ಶಂಕರ್ ನಿರ್ದೇಶನದ ಯಾವುದೇ ಸಿನಿಮಾವನ್ನು ತಮಿಳುನಾಡಿನಲ್ಲಿ ಬಿಡುಗಡೆಗೆ ಅವಕಾಶ ಕೊಡಬಾರದೆಂದು ಲೈಕಾ ಸಂಸ್ಥೆ ಆಗ್ರಹಿಸಿತ್ತು.
‘ಇಂಡಿಯನ್ 2’ ಸಿನಿಮಾದ ಚಿತ್ರೀಕರಣದ ಸಮಯದಿಂದಲೂ ಶಂಕರ್ ಹಾಗೂ ಲೈಕಾ ಪ್ರೊಡಕ್ಷನ್ ಹೌಸ್ ನಡುವೆ ವಿವಾದಗಳು ನಡೆಯುತ್ತಲೇ ಇವೆ. ಪ್ರಕರಣ ಕೋರ್ಟ್ ಮೆಟ್ಟಿಲು ಸಹ ಏರಿತ್ತು. ಕೊನೆಗೂ ಶಂಕರ್, ಲೈಕಾ ಪ್ರೊಡಕ್ಷನ್ ನಿರ್ಮಾಣದ ‘ಇಂಡಿಯನ್ 2’ ಸಿನಿಮಾದ ಚಿತ್ರೀಕರಣ ಮುಗಿಸಿಕೊಟ್ಟರು. ಸಿನಿಮಾ ಬಿಡುಗಡೆಯೂ ಆದರೂ ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಆಯ್ತು. ಲೈಕಾ ನಿರ್ಮಾಣ ಸಂಸ್ಥೆ ಈಗ, ಶಂಕರ್ ‘ಇಂಡಿಯನ್ 3’ ಸಿನಿಮಾ ನಿರ್ದೇಶನ ಮಾಡಿಕೊಡಬೇಕು ಎಂದು ಶಂಕರ್ ಹಿಂದೆ ಬಿದ್ದಿದೆ. ಹಾಗಾಗಿಯೇ ಈಗ ‘ಗೇಮ್ ಚೇಂಜರ್’ ಬಿಡುಗಡೆ ಮಾಡದಂತೆ ನಿರ್ಮಾಪಕರ ಕೌನ್ಸಿಲ್ಗೆ ದೂರು ನೀಡಿತ್ತು.
ಆದರೆ ಶಂಕರ್, ‘ಗೇಮ್ ಚೇಂಜರ್’ ನಿರ್ಮಾಪಕ ದಿಲ್ ರಾಜು, ಕಮಲ್ ಹಾಸನ್ ಅವರುಗಳು ಲೈಕಾ ನಿರ್ಮಾಣ ಸಂಸ್ಥೆ ಜೊತೆ ಮಾತುಕತೆ ಆಡಿದ್ದು, ವಿವಾದವನ್ನು ಬಗೆಹರಿಸಿದ್ದಾರೆ. ಹಾಗಾಗಿ ‘ಗೇಮ್ ಚೇಂಜರ್’ ಸಿನಿಮಾ ತಮಿಳುನಾಡಿನಲ್ಲಿ ಯಾವುದೇ ಅಡೆ-ತಡೆ ಇಲ್ಲದೆ ಜನವರಿ 10 ರಂದು ಬಿಡುಗಡೆ ಆಗಲಿದೆ ಎನ್ನಲಾಗಿದೆ.