ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಮ್ಯಾಕ್ಸ್ವೆಲ್ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಹೀಗಾಗಿ ಅವರು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ. ಅದರಂತೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕ್ಯಾಮರೋನ್ ಗ್ರೀನ್ ಕಣಕ್ಕಿಳಿಯುವ ಸಾಧ್ಯತೆಯಿದೆ
ಏಕೆಂದರೆ ಕಳೆದ ಪಂದ್ಯದಲ್ಲಿ ಕ್ಯಾಮರೋನ್ ಗ್ರೀನ್ ಬದಲಿಗೆ ವಿಲ್ ಜಾಕ್ಸ್ ಕಣಕ್ಕಿಳಿದಿದ್ದರು. ಇದೀಗ ಮ್ಯಾಕ್ಸ್ವೆಲ್ ಹೊರಗುಳಿದರೆ ಅವರ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರ ಆರ್ಸಿಬಿ ತಂಡದಲ್ಲಿಲ್ಲ. ಹೀಗಾಗಿ ಔಟ್ ಆಫ್ ಫಾರ್ಮ್ನಲ್ಲಿರುವ ಗ್ರೀನ್ ಅವರನ್ನೇ ಮತ್ತೆ ಕಣಕ್ಕಿಳಿಸಬೇಕಾದ ಅನಿವಾರ್ಯತೆ ಆರ್ಸಿಬಿ ಮುಂದಿದೆ.
ಇನ್ನು ಈ ಬಾರಿಯ ಐಪಿಎಲ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಆಡಿರುವ 6 ಇನಿಂಗ್ಸ್ಗಳಿಂದ ಮ್ಯಾಕ್ಸಿ ಕಲೆಹಾಕಿದ್ದು ಕೇವಲ 32 ರನ್ಗಳು ಮಾತ್ರ. ಈ ಆರು ಇನಿಂಗ್ಸ್ಗಳಲ್ಲಿ ಅವರು ಕಲೆಹಾಕಿದ ಗರಿಷ್ಠ ಸ್ಕೋರ್ 28 ರನ್ಗಳು. ಇನ್ನುಳಿದ 5 ಇನಿಂಗ್ಸ್ಗಳಲ್ಲಿ ಕ್ರಮವಾಗಿ 0,1,0,3,0 ಗೆ ವಿಕೆಟ್ ಒಪ್ಪಿಸಿದ್ದಾರೆ.
ಇದಾಗ್ಯೂ ನಿರ್ಣಾಯಕ ಪಂದ್ಯಗಳ ವೇಳೆ ಮ್ಯಾಕ್ಸ್ವೆಲ್ ಫಾರ್ಮ್ಗೆ ಮರಳುವ ನಿರೀಕ್ಷೆಯಿತ್ತು. ಆದರೀಗ ಸೋಲಿನ ಸಂಕೋಲೆಯಿಂದ ಪಾರಾಗುವ ಪ್ರಯತ್ನದಲ್ಲಿರುವ ಆರ್ಸಿಬಿಗೆ ಮ್ಯಾಕ್ಸ್ವೆಲ್ ಅವರ ಗಾಯವು ಹೊಸ ಚಿಂತೆಯನ್ನು ಉಂಟು ಮಾಡಿದೆ.