ಬೆಂಗಳೂರು:- ಜನಾದೇಶದ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ತನ್ನ ಗ್ಯಾರಂಟಿಗಳಿಂದಲೇ ಸದ್ದು ಮಾಡಿತ್ತು. ಆದರೆ ಇದೀಗ ಒಂದರ ಮೇಲೊಂದರಂತೆ ದರ ಏರಿಕೆ ಮಾಡುತ್ತಿದ್ದು, ಇದು ಜನರಿಗೆ ಸಂಕಷ್ಟ ತಂದಿದೆ.
ನಗರದಲ್ಲಿ ಬಸ್, ಮೆಟ್ರೋ ದರ ಏರಿಕೆ ಬಳಿಕ ಇದೀಗ ಆಟೋ ಮೀಟರ್ ದರ ಏರಿಕೆಗೆ ಮುಹೂರ್ತ ಫಿಕ್ಸ್ ಆಗಿದೆ. ಜೊತೆಗೆ ಬಜೆಟ್ ನಂತರ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ.
ಪ್ರಯಾಣಿಕರಿಗೆ ಬಿಗ್ ಶಾಕ್: ಬೆಂಗಳೂರಿನಲ್ಲಿ ಆಟೋ ಮೀಟರ್ ದರ ಏರಿಕೆಗೆ ಮುಹೂರ್ತ ಫಿಕ್ಸ್ !
ಶೀಘ್ರದಲ್ಲೇ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ. ಈ ಕುರಿತು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ದರ ಏರಿಕೆ ಮಾಡುವುದಾಗಿ ಸುಳಿವು ಕೊಟ್ಟಿದ್ದಾರೆ. ಬಜೆಟ್ ಬಳಿಕ ಹಾಲಿನ ದರ ಏರಿಕೆಯಾಗಲಿದ್ದು, ಸದ್ಯ ಒಕ್ಕೂಟಗಳ ಬೇಡಿಕೆ ಪ್ರಕಾರ ಕೆಎಂಎಫ್ ಸರ್ಕಾರಕ್ಕೆ 5 ರೂ. ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿದೆ.
ಇನ್ನೊಂದು ಕಡೆ ರೈತರು 10 ರೂ. ಏರಿಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಒಕ್ಕೂಟ ಹಾಗೂ ರೈತರ ಮನವಿ ಪರಿಶೀಲಿಸಿ, ಸರ್ಕಾರ ಏರಿಕೆ ದರ ನಿರ್ಧಾರ ಮಾಡಲಿದೆ. ಏಪ್ರಿಲ್ ಮೊದಲ ವಾರದಲ್ಲಿ ಕೆಎಂಎಫ್ ಜೊತೆ ಸಿಎಂ ಸಭೆ ನಡೆಸುವ ಸಾಧ್ಯತೆಯಿದೆ.
ಬಿಎಂಟಿಸಿ, ಮೆಟ್ರೋ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಆಟೋ ದರವು ಜಾಸ್ತಿ ಆಗುವ ನಿರೀಕ್ಷೆಯಿದ್ದು, 1 ಕಿ.ಮೀಗೆ 5 ರೂ. 2 ಕಿಮೀಗೆ 10 ರೂ. ಏರಿಕೆ ಮಾಡಲು ಆಟೋ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ. ಇದೇ 12 ರಂದು ಇನ್ ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ದರ ಏರಿಕೆ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.