IPL ಮೆಗಾ ಹರಾಜು ನಡೆಯುತ್ತಿದ್ದು, ಮೆಗಾ ಹರಾಜಿನಲ್ಲಿ RCB ಕೆಲವು ಅಚ್ಚರಿ ಹೆಸರುಗಳನ್ನು ಕೈ ಬಿಟ್ಟಿದೆ.
ಅದರಲ್ಲೂ ತಂಡದಲ್ಲೇ ಉಳಿಯುತ್ತಾರೆ ಎಂಬ ನಿರೀಕ್ಷೆ ಇಟ್ಟಿದ್ದ ವಿಲ್ ಜಾಕ್ಸ್ ಅವರನ್ನು RCB ಕೈ ಬಿಟ್ಟಿದೆ. ಮೆಗಾ ಹರಾಜಿಗೂ ಮುನ್ನ ಕೇವಲ 3 ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದ ಆರ್ಸಿಬಿ, ಮಿಕ್ಕ ಮೂವರು ಪ್ರಮುಖ ಆಟಗಾರರನ್ನು ಹರಾಜಿನಲ್ಲಿ ಆರ್ಟಿಎಮ್ ಬಳಸಿಕೊಂಡು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಅಭಿಮಾನಿಗಳು ನಿರೀಕ್ಷಿಸಿದ್ದ ಆ ಹೆಸರಿನಲ್ಲಿ ಪ್ರಮುಖ ಹೆಸರೆಂದರೆ ಅದು ಇಂಗ್ಲೆಂಡ್ನ ಸ್ಫೋಟಕ ಬ್ಯಾಟ್ಸ್ಮನ್ ವಿಲ್ ಜ್ಯಾಕ್ಸ್. ಅಭಿಮಾನಿಗಳ ಹೊರತಾಗಿ ಕ್ರಿಕೆಟ್ ಪಂಡಿತರು ಕೂಡ ಆರ್ಸಿಬಿ, ವಿಲ್ ಜ್ಯಾಕ್ಸ್ರನ್ನು ಆರ್ಟಿಎಮ್ ಬಳಸಿ ತಂಡದಲ್ಲಿ ಉಳಿಸಿಕೊಳ್ಳಲಿದೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಆದರೆ ಎಲ್ಲರ ನಿರೀಕ್ಷೆಗಳು ಹುಸಿಯಾಗಿಸಿದೆ.
ವಾಸ್ತವವಾಗಿ ಈ ಬಾರಿಯ ಮೆಗಾ ಹರಾಜಿನಲ್ಲಿ ಅತ್ಯಧಿಕ ಬೆಲೆಗೆ ಮಾರಾಟವಾಗುವ ಆಟಗಾರರ ಪಟ್ಟಿಯಲ್ಲಿ ವಿಲ್ ಜ್ಯಾಕ್ಸ್ ಅವರ ಹೆಸರಿತ್ತು. ಅದರಂತೆ ಹರಾಜಿನ ಎರಡನೇ ದಿನ ಹರಾಜಿಗೆ ಬಂದ ವಿಲ್ ಜ್ಯಾಕ್ಸ್ರನ್ನು ಖರೀದಿಸಲು ಮುಂಬೈ ಹಾಗೂ ಪಂಜಾಬ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಮುಂಬೈ ಜ್ಯಾಕ್ಸ್ಗೆ 5.25 ಕೋಟಿ ರೂ. ನೀಡಲು ಮುಂದಾಯಿತು. ಈ ವೇಳೆ ಆರ್ಸಿಬಿ ಆರ್ಟಿಎಮ್ ಬಳಸಿ ವಿಲ್ ಜ್ಯಾಕ್ಸ್ರನ್ನು ಮತ್ತೆ ತನ್ನಲ್ಲೇ ಉಳಿಸಿಕೊಳ್ಳಲಿದೆ ಎಂಬುದು ಎಲ್ಲರ ಧೃಡ ನಿರೀಕ್ಷೆಯಾಗಿತ್ತು. ಆದರೆ ಎಲ್ಲರ ನಿರೀಕ್ಷೆಯನ್ನು ಹುಸಿಯಾಗಿಸಿದ ಆರ್ಸಿಬಿ, ಜ್ಯಾಕ್ಸ್ ಮೇಲೆ ಆರ್ಟಿಎಮ್ ಬಳಸಲೇ ಇಲ್ಲ.
ಆರ್ಸಿಬಿಯ ಈ ನಿರ್ಧಾರ ಕಂಡು ಒಂದು ಕ್ಷಣ ಇಡೀ ಮುಂಬೈ ಪಾಳಯವೇ ಅಚ್ಚರಿ ವ್ಯಕ್ತಪಡಿಸಿತು. ಕೆಲವು ಹೊತ್ತು ಅಚ್ಚರಿಯಿಂದಲೇ ಕುಳಿತಿದ್ದ ಮುಂಬೈ ತಂಡದ ಸದಸ್ಯರು, ಜ್ಯಾಕ್ಸ್ ನಮ್ಮ ತಂಡಕ್ಕೆ ಸೇರಿದರೆಂಬ ಸಂತಸದಲ್ಲಿ ಒಬ್ಬರನ್ನೊಬ್ಬರು ಕೈಕುಲುಕಿ ಹರ್ಷ ವ್ಯಕ್ತಪಡಿಸಿದರು. ಇತ್ತ ತನ್ನ ತಂಡಕ್ಕೆ ವಿಲ್ ಜ್ಯಾಕ್ಸ್ ಸೇರಿದ ಖುಷಿಯಲ್ಲಿ ತನ್ನ ಕುರ್ಚಿಯಿಂದ ಎದ್ದು ಬಂದ ಆಕಾಶ್ ಅಂಬಾನಿ, ಆರ್ಸಿಬಿ ತಂಡದ ಬಳಿ ಬಂದು ಎಲ್ಲರಿಗೂ ಕೈಕುಲುಕಿ ಧನ್ಯವಾದ ತಿಳಿಸಿದರು.