ಬೆಂಗಳೂರು: ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್ ತೊರೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ, ಪಕ್ಷದಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದ ಇಬ್ಬರು ಮಾಜಿ ಶಾಸಕರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿಸಿ ಗೌರಿಶಂಕರ್ ಮತ್ತು ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಮಂಜುನಾಥ್ ಅವರು ಜೆಡಿಎಸ್ಗೆ ಗುಡ್ಬೈ ಹೇಳಲಿದ್ದಾರೆ. ಇಬ್ಬರೂ ಬೆಂಗಳೂರಿನಲ್ಲಿ ಬುಧವಾರ ಕಾಂಗ್ರೆಸ್ ಸೇರಲಿದ್ದಾರೆ.
ಈ ಇಬ್ಬರೂ ಸೇರ್ಪಡೆಯಾದರೆ ಕಾಂಗ್ರೆಸ್ಗೆ ಪ್ರಬಲ ನೆಲೆ ಇಲ್ಲದಿದ್ದ ಕ್ಷೇತ್ರಗಳಲ್ಲಿ ಬಲ ಬಂದಂತಾಗಲಿದೆ. ವಿಧಾನಸಭಾ ಚುನಾವಣೆಗೂ ಮುನ್ನವೇ ಹಲವಾರು ಹಾಲಿ-ಮಾಜಿ ಶಾಸಕರು ಕಾಂಗ್ರೆಸ್ನತ್ತ ಮುಖಮಾಡಿದ್ದರು. ಇಂತಹ ಪ್ರಹಸನಗಳ ನಡುವೆಯೂ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ, ಜೆಡಿಎಸ್ ತೊರೆಯುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.
ಗೌರಿಶಂಕರ್ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಮಂಜುನಾಥ್ ಅವರೂ ಕೂಡ ಹಿಂದೆ ಕಾಂಗ್ರೆಸ್ನಲ್ಲಿಯೇ ಇದ್ದರು. ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲವೆಂದು ಜೆಡಿಎಸ್ ಸೇರಿದ್ದರು. ಈಗ ಬಿಜೆಪಿ ಜೊತೆಗಿನ ಮೈತ್ರಿ ವಿರೋಧಿಸಿ ಜೆಡಿಎಸ್ ತೊರೆದಿದ್ದಾರೆ. ಅವರಿಬ್ಬರೂ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ.