ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಮೀಟರ್ ದರ ಏರಿಕೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಈ ಮೂಲಕ ಪ್ರಯಾಣಿಕರಿಗೆ ಶಾಕ್ ಎದುರಾಗಿದೆ.
ಆಟೋ ಮೀಟರ್ ದರ ಹೆಚ್ವಳ ಮಾಡಿ ನಾಲ್ಕು ವರ್ಷ ಆಗಿದೆ. ಈಗ ಸಿಎನ್ಜಿ ಹಾಗೂ ಎಲ್ಪಿಜಿ ದರ ಹೆಚ್ಚಳವಾಗಿದೆ. ಹಾಗಾಗಿ ಬೆಂಗಳೂರು ಆಟೋ ಮೀಟರ್ ದರ ಹೆಚ್ಚಳಕ್ಕೆ ಚರ್ಚೆಗಳು ನಡೆದಿವೆ.
ಇದೀಗ ಮಾರ್ಚ್ ನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಆಟೋ ಮೀಟರ್ ದರ ಹೆಚ್ಚಳವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ದರ ಏರಿಕೆ ಬಗ್ಗೆ ತೀರ್ಮಾನಿಸಲು ಮಾರ್ಚ್ 12 ರಂದು ಮುಹೂರ್ತ ಫಿಕ್ಸ್ ಆಗಿದೆ. ಕಳೆದ ವರ್ಷವೇ ಆಟೋ ಚಾಲಕ ಸಂಘಟನೆಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ದರ ಏರಿಕೆ ಮಾಡುವಂತೆ ಮನವಿ ಮಾಡಿದ್ದವು. ಈ ದರ ಏರಿಕೆ ಮಾಡುವ ಬಗ್ಗೆ ಚರ್ಚಿಸಲು ಮಾರ್ಚ್12 ರಂದು 11 ಗಂಟೆಗೆ ಇನ್ ಫೆಂಟ್ರಿ ರಸ್ತೆಯಲ್ಲಿರುವ.ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ.
ಟ್ರಾಫಿಕ್ ಈಸ್ಟ್ ಡಿಸಿಪಿ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಎಷ್ಟು ಏರಿಕೆ ಮಾಡಬೇಕೆಂಬ ಮಾತು ನಡೆಯಲಿದೆ. ಒಂದು ಕಿ.ಮೀಗೆ 5 ರುಪಾಯಿ, ಎರಡು ಕಿಮೀಗೆ 10 ರುಪಾಯಿ ಏರಿಕೆ ಮಾಡುವಂತೆ ಆಟೋ ಸಂಘಟನೆಗಳು ಮನವಿ ಮಾಡಲಾಗಿದೆ. ಬೆಂಗಳೂರಲ್ಲಿ ಮಿನಿಮಮ್ ಆಟೋ ಮೀಟರ್ ದರ ಎರಡು ಕಿಮೀ ಗೆ 30 ರುಪಾಯಿ ಇದೆ. ಈ ಮಿನಿಮಮ್ ದರವನ್ನು 40 ರೂಪಾಯಿಗೆ ಏರಿಕೆ ಮಾಡುವಂತೆ ಮನವಿ ಮಾಡಿವೆ.
2021ರಲ್ಲಿ ಆಟೋ ಮೀಟರ್ ದರ ಹೆಚ್ಚಳ ಮಾಡಲಾಗಿತ್ತು.ಇತ್ತ ಆಟೋ ಸಿಎನ್ಜಿ ಒಂದು ಕೆಜಿಗೆ 88 ರುಪಾಯಿ ಆಗಿದೆ. ಇನ್ನು ಎಲ್ಪಿಜಿ ಕೆಜಿ 61 ರುಪಾಯಿ ಆಗಿದೆ. ಹಾಗಾಗಿ ಮೀಟರ್ ದರ ಏರಿಕೆ ಮಾಡಲೇಬೇಕೆಂದು ಆಟೋ ಚಾಲಕರು ಪಟ್ಟು ಹಿಡಿದಿದ್ದು, ಮಾ. 12 ರಂದು ನಡೆಯಲಿರುವ ಸಭೆಯಲ್ಲಿ ದರ ಏರಿಕೆ ಬಗ್ಗೆ ಅಂತಿಮ ತೀರ್ಮಾನವಾಗಲಿದೆ.