ಬೆಂಗಳೂರು:- ಬೆಂಗಳೂರು ಸೇರಿ ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ದಾರರಿಗೆ ಕಂಟಕ ಎದುರಾಗಲಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಸದ್ಯ ಬಿಪಿಎಲ್, ಅಂತ್ಯೋದಯ ಅನ್ನ ಯೋಜನೆ ಸೇರಿ 1.27 ಕೋಟಿ ಕಾರ್ಡ್ಗಳಿವೆ. 4.36 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಇದರಲ್ಲಿ ಲಕ್ಷಾಂತರ ಕಾರ್ಡ್ಗಳನ್ನು ಅರ್ಹತೆಯಿಲ್ಲದವರೂ ಪಡೆದು, ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ಸರಕಾರದ ನಾನಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದರಿಂದ ಅರ್ಹರಿಗೆ ಸಿಗಬೇಕಿರುವ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿವೆ
ಹೀಗಾಗಿ, ಇಂತಹ ಕಾರ್ಡ್ಗಳನ್ನು ಎಪಿಎಲ್ ಆಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಸದ್ಯ ವಿತರಣೆಯಾಗಿರುವ ಬಿಪಿಎಲ್ ಕಾರ್ಡ್ಗಳಲ್ಲಿ ಶೇ.20ರಷ್ಟು ಅನರ್ಹ ಕಾರ್ಡ್ಗಳು ಬೆಂಗಳೂರಿನಲ್ಲಿಯೇ ಇದ್ದು, ರಾಜ್ಯಾದ್ಯಂತ ಸುಮಾರು ಶೇ.15-20ರಷ್ಟಿವೆ. ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.5.67 ರಷ್ಟಿರಬೇಕು. ಆದರೆ, ರಾಜ್ಯದಲ್ಲಿಈ ಪ್ರಮಾಣ ಶೇ 80 ರಷ್ಟಿದೆ. ರಾಜ್ಯದಲ್ಲಿ ಸದ್ಯ 1.27 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಹೀಗಾಗಿ, ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಿ, ಅರ್ಹರಿಗೆ ಬಿಪಿಎಲ್ ಕಾರ್ಡ್ ಒದಗಿಸಬೇಕು ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯಪ್ರವೃತ್ತವಾಗಲು ನಿರ್ಧರಿಸಿದ್ದು, ಅರ್ಹರಲ್ಲದ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಪರಿವರ್ತಿಸಲು ಮುಂದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸತತ ಎರಡು ದಿನಗಳ ಕಾಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿದರು. ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಿವೆ. ಪ್ರಮುಖವಾಗಿ ಬಿಪಿಎಲ್ ಕಾರ್ಡ್ಗಳ ಕುರಿತು ಮಹತ್ವದ ಚರ್ಚೆ ನಡೆದಿದೆ.
ಸಭೆಯಲ್ಲಿ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ಗಳ ಸಂಖ್ಯೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿರುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಅನರ್ಹರ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ, ಅವರ ಕಾರ್ಡ್ ಅನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸಲು ಸೂಚನೆ ನೀಡಿದ್ದಾರೆ.
ಅಧಿಕಾರಿಗಳು ಸಭೆಯಲ್ಲಿ ನೀಡಿರುವ ಮಾಹಿತಿ ಅನ್ವಯ ರಾಜ್ಯದಲ್ಲಿ 1.27 ಕೋಟಿ ಬಿಪಿಎಲ್ ಕುಟುಂಬಗಳಿವೆ. ಆದರೆ 4.37 ಕೋಟಿ ಬಿಪಿಎಲ್ ಕಾರ್ಡ್ಗಳಿವೆ. ಅಲ್ಲದೇ ಹೊಸದಾಗಿ ಬಿಪಿಎಲ್ ಕಾರ್ಡ್ಗಳಿಗಾಗಿ 2.95 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ವಿಲೇವಾರಿಯಾಗಬೇಕಿದೆ.
ನೀತಿ ಆಯೋಗದ ವರದಿ ಪ್ರಕಾರ ರಾಜ್ಯದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಬಿಪಿಎಲ್ ಕಾರ್ಡ್ಗಳ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕೆ ಕಾರಣವೇನು? ಎಂದು ಸಿದ್ದರಾಮಯ್ಯ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರನ್ನು ಗುರುತಿಸಿ ಅವರ ಕಾರ್ಡ್ ಅನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಮಾಡಿ ಎಂದು ಸೂಚನೆ ನೀಡಿದ್ದಾರೆ.
ಕಾರ್ಡ್ ಪಡೆಯಲು ಅರ್ಹತೆಗಳು:
ಸದ್ಯದ ಮಾರ್ಗಸೂಚಿಗಳ ಅನ್ವಯ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಹಲವಾರು ನಿಯಮಗಳಿವೆ. ಕಾರ್ಡ್ ಪಡೆಯುವವರ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತಲೂ ಕಡಿಮೆ ಇರಬೇಕು.
ಬಿಳಿ ಬಣ್ಣದ ನಂಬರ್ ಪ್ಲೇಟ್ ಹೊಂದಿರುವ ನಾಲ್ಕು ಚಕ್ರದ ವಾಹನವನ್ನು ಹೊಂದಿರುವಂತಿಲ್ಲ. ಆದಾಯ ತೆರಿಗೆ ರಿಟರ್ನ್ ಪಾವತಿ ಮಾಡುವವರು ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ.
ಹಳ್ಳಿಯಲ್ಲಿ 3 ಹೆಕ್ಟೇರ್ ಒಣಭೂಮಿ/ ತತ್ಸಮಾನ ನೀರಾವರಿ ಭೂಮಿ ಹೊಂದಿರುವವರು. ನಗರ ಪ್ರದೇಶದಲ್ಲಿ 1000 ಚದರ ಅಡಿ ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ.
ಸರ್ಕಾರಿ ಮತ್ತು ಅರೆ ಸರ್ಕಾರಿ ಉದ್ಯೋಗದಲ್ಲಿರುವವರು ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ. ಆದರೆ ಈಗ ಒಂದು ಮನೆಯಲ್ಲಿ ಮೂರು, ನಾಲ್ಕು ಬಿಪಿಎಲ್ ಕಾರ್ಡ್ಗಳಿವೆ. ಅವುಗಳನ್ನು ಪತ್ತೆ ಹಚ್ಚಿ, ಅನರ್ಹ ಕಾರ್ಡ್ಗಳನ್ನು ಎಪಿಲ್ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಏಕೆ ಇಷ್ಟು ಬೇಡಿಕೆ?; ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ಗಳ ಸಂಖ್ಯೆ ಹೆಚ್ಚಾಗಲು ಕಾರಣವೇನು? ಎಂದು ನೋಡುತ್ತಾ ಹೋದರೆ ಅಚ್ಚರಿಯ ಅಂಶಗಳು ಬಯಲಾಗುತ್ತವೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಯೋಜನ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಾಗಿ ಹೆಚ್ಚು ಜನರು ಬಿಪಿಎಲ್ ಕಾರ್ಡ್ ಮಾಡಿಸಿಲ್ಲ.
ಆರೋಗ್ಯ ಸೇವೆಗಾಗಿಯೇ ಹೆಚ್ಚು ಜನರು ನಕಲಿ ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಬಿಪಿಎಲ್ ಕಾರ್ಡ್ ಇದ್ದರೆ ಕ್ಯಾನ್ಸರ್, ಕಿಡ್ನಿ, ಹೃದಯ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ರಿಯಾಯಿತಿ ದರದಲ್ಲಿ/ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ. ಆದ್ದರಿಂದ ಜನರು ಕಾರ್ಡ್ ಪಡೆಯಲು ಹೆಚ್ಚು ಹೆಚ್ಚು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ.