ವಾಷಿಂಗ್ ಟನ್: ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಅವಧಿ ಮುಗಿದಿದ್ದು ಮುಂದಿನ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ ನಿರ್ಗಮನಕ್ಕೂ ಮುನ್ನ ಬೈಡನ್ ತೆಗೆದುಕೊಂಡು ನಿರ್ಧಾರವೊಂದು ಅಮೆರಿಕದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಅಧ್ಯಕ್ಷ ಜೋ ಬೈಡನ್ ಶ್ವೇತಭವನದಿಂದ ನಿರ್ಗಮನಕ್ಕೂ ಮುನ್ನ ತಮ್ಮ ಮಗ ಹಂಟರ್ ಬೈಡನ್ಗೆ ಅಕ್ರಮ ಪ್ರಕರಣವೊಂದರಲ್ಲಿ ಕಾನೂನಾತ್ಮಕವಾಗಿ ಕ್ಷಮಾದಾನ ನೀಡಿದ್ದಾರೆ. ಇದು ಅಲ್ಲಿನ ನಿವಾಸಿಗಳ ಅಸಮಾಧಾನ ಭುಗಿಲೇಳುವಂತೆ ಮಾಡಿದೆ.
ಬೈಡನ್ ಪುತ್ರ ಹಂಟರ್ ಬೈಡನ್ ವಿರುದ್ಧ ಅಕ್ರಮವಾಗಿ ಬಂದೂಕು ಖರೀದಿ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಬಂದೂಕು ಅಪರಾಧ ಮತ್ತು ತೆರಿಗೆ ಸಂಬಂಧಿತ ಪ್ರಕರಣದಲ್ಲಿ ಇತ್ತೀಚೆಗೆ ಹಂಟರ್ ಗೆ ಶಿಕ್ಷೆ ಘೋಷಣೆಯಾಗುವುದರಲ್ಲಿತ್ತು. ಆದರೆ ಇದಕ್ಕೂ ಮೊದಲು ಬೈಡೆನ್ ತಮ್ಮ ಅಧಿಕಾರ ಬಳಸಿ ಪುತ್ರನಿಗೆ ರಕ್ಷಣೆ ನೀಡಿದ್ದಾರೆ.
ಹಂಟರ್ ಕ್ಷಮಾದಾನಕ್ಕೆ ನಾನು ಸಹಿ ಹಾಕಿದ್ದೇನೆ. ಅಧಿಕಾರ ವಹಿಸಿಕೊಂಡಾಗಿನಿಂದ ನ್ಯಾಯಾಂಗದ ನಿರ್ಧಾರದಲ್ಲಿ ಮಧ್ಯಪ್ರವೇಶಿಸಿರಲಿಲ್ಲ. ಇಲ್ಲಿಯವರೆಗೂ ಆದೇ ರೀತಿ ನಡೆದಿದ್ದೇನೆ. ಪುತ್ರನ ವಿರುದ್ಧ ಅನ್ಯಾಯವಾಗಿ ವಿಚಾರಣೆ ನಡೆದಾಗಲೂ ನಾನು ಮೌನವಾಗಿದ್ದೆ ಎಂದು ಜೋ ಬೈಡನ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಕ್ರಮವಾಗಿ ಬಂದೂಕು ಖರೀದಿಸಿದ್ದ ಪ್ರಕರಣದಲ್ಲಿ ಅಧ್ಯಕ್ಷ ಜೋ ಬೈಡನ್ ಪುತ್ರ ಹಂಟರ್ ಬೈಡನ್ ವಿರುದ್ಧ ಸೆಪ್ಟೆಂಬರ್ 15,2023ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದು ಒಂದು ಪ್ರಕರಣವಾಗಿದ್ದರೆ, ತಾನು ಡ್ರಗ್ಸ್ ಬಳಸುತ್ತಿರಲಿಲ್ಲ ಎಂದು ಹಂಟರ್ ಸುಳ್ಳು ಹೇಳಿಕೆ ನೀಡಿದ್ದರು ಎಂಬುದು ಎರಡನೇ ಪ್ರಕರಣವಾಗಿದೆ. ಎರಡು ಪ್ರಕರಣಗಳಲ್ಲಿ ಹಂಟರ್ ದೋಷಿ ಎಂಬುದು ಸಾಬೀತಾಗಿತ್ತು. ಹಂಟರ್ ಬೈಡನ್ ಕ್ಷಮಾದಾನದ ಕುರಿತು ನ್ಯಾಯಮೂರ್ತಿಗಳಿಗೆ ಮಾಹಿತಿ ನೀಡಿದ್ದರು.
ಹಂಟರ್ ಓರ್ವ ಮಾದಕ ವ್ಯಸನಿಯಾಗಿದ್ದು. ಆತನಿಗೆ ತಾವು ಕ್ಷಮಾದಾನ ನೀಡುವುದಾಗಲೀ ಶಿಕ್ಷೆಯನ್ನು ಕಡಿಮೆ ಮಾಡುವುದಾಗಲಿ ಮಾಡುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದರು.
ಅಧಿಕಾರದ ಕೊನೆಯ ದಿನಗಳಲ್ಲಿರುವ ಜೋ ಬೈಡನ್ ಅವರ ಈ ನಡೆಯ ಕುರಿತು ಅಮೇರಿಕಾ ರಾಜಕಾರಣದಲ್ಲಿ ಚರ್ಚೆ ನಡೆದಿದೆ. ಅಮೇರಿಕಾದ ರಾಜಕಾರಣಿ, ಸೆನೆಟರ್ ಸ್ಯಾಂಡರ್ಸ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಜೋ ಬೈಡನ್ ತಮ್ಮ ಪುತ್ರ ಹಂಟರ್ ಗೆ ಕ್ಷಮಾದಾನ ನೀಡಿರುವುದರ ಹಿಂದಿನ ಭಾವನೆ ನಮಗೆ ಅರ್ಥವಾಗುತ್ತದೆ. ಆದರೆ ಇದೇ ಮುಂದಿನ ದಿನಗಳಲ್ಲಿ ಬರುವ ಅಧ್ಯಕ್ಷರಿಗೆ ಮಾದರಿಯಾಗಬಹುದೆಂಬ ಆತಂಕ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.