ಬಿಗ್ ಬಾಸ್ ಸೀಸನ್ 11 ಆರಂಭವಾಗಿ ಕೆಲ ವಾರಗಳೇ ಕಳೆದಿದೆ. ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಈ ಎಪಿಸೋಡ್ ಸದ್ದು ಮಾಡುತ್ತಿದೆ. ಅದರಲ್ಲೂ ವೀಕೆಂಡ್ ಬಂತು ಎಂದರೆ ಯಾರು ಈ ವಾರ ಎಲಿಮಿನೇಟ್ ಆಗ್ತಿದ್ದಾರೆ ಎಂಬ ಟೆನ್ಷನ್ ಹೆಚ್ಚಗುತ್ತೆ. ಯಾರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲೂ ಕಾಡುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಈ ವಾರ ಒಟ್ಟು 7 ಮಂದಿ ನಾಮಿನೇಟ್ ಆಗಿದ್ದರು. ಅವರಲ್ಲಿ ಯಾರ ಆಟ ಅಂತ್ಯ ಆಗಲಿದೆ ಎಂಬ ಕೌತುಕ ಇತ್ತು. ಅಂತಿಮವಾಗಿ ಎಲ್ಲರೂ ಸೇಫ್ ಆಗಿದ್ದರು. ಆದರೆ ಕೊನೆಯಲ್ಲಿ ಉಳಿದುಕೊಂಡಿದ್ದು ಭವ್ಯಾ ಮತ್ತು ಧನರಾಜ್. ಅವರಿಗೂ ಒಂದು ಸರ್ಪೈಸ್ ಕಾದಿತ್ತು.
ಡೇಂಜರ್ ಝೋನ್ನಲ್ಲಿ ಇದ್ದ ಧನರಾಜ್ ಮತ್ತು ಭವ್ಯಾ ಅವರ ಪೈಕಿ ಧನರಾಜ್ ಸೇಫ್ ಆದರು. ಭವ್ಯಾ ಅವರು ಲಗೇಜ್ ಪ್ಯಾಕ್ ಮಾಡಿಕೊಂಡು ಮುಖ್ಯದ್ವಾರದ ಕಡೆಗೆ ಬರಬೇಕಾಯಿತು. ಎಲಿಮಿನೇಷನ್ನಲ್ಲಿ ಭವ್ಯಾ ಹೆಸರು ಬರುತ್ತದೆ ಎಂದು ಬಹುತೇಕರು ಊಹಿರಲಿಲ್ಲ. ಹಾಗಾಗಿ ಐಶ್ವರ್ಯಾ, ಶಿಶಿರ್, ತ್ರಿವಿಕ್ರಮ್ ಮುಂತಾದವರು ಸಿಕ್ಕಾಪಟ್ಟೆ ಎಮೋಷನಲ್ ಆದರು.
ಇನ್ನೇನು ಭವ್ಯಾ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕು ಎಂಬಷ್ಟರಲ್ಲಿ ಒಂದು ಟ್ವಿಸ್ಟ್ ನೀಡಲಾಯಿತು. ದೊಡ್ಮನೆಯ ಬಾಗಿಲು ಓಪನ್ ಆಗಲೇ ಇಲ್ಲ. ‘ಭವ್ಯ ಅವರೇ.. ಈ ವಾರ ಈ ಮನೆಯಲ್ಲಿ ನಿಮ್ಮ ಪಯಣ ಮುಂದುವರಿಯುತ್ತದೆ’ ಎಂದು ಬಿಗ್ ಬಾಸ್ ಘೋಷಿಸಿದರು. ಇನ್ನೇನು ಹೊರಗೆ ಹೋಗಿ ಫ್ಯಾಮಿಲಿಯವರನ್ನು ನೋಡಬೇಕು ಎಂದುಕೊಂಡಿದ್ದ ಭವ್ಯಾಗೆ ಬಿಗ್ ಬಾಸ್ ಹೇಳಿದ ಮಾತು ಕೇಳಿ ಅಚ್ಚರಿ ಆಗಿದೆ.
ಭವ್ಯಾ ಎಲಿಮಿನೇಟ್ ಆಗಿಲ್ಲ ಎಂಬುದು ಗೊತ್ತಾದ ಬಳಿಕ ಇನ್ನುಳಿದ ಸ್ಪರ್ಧಿಗಳು ಬಂದು ವಿಶ್ ಮಾಡಿದರು. ಈ ವಾರ ಓಟಿಂಗ್ ಲೈನ್ಸ್ ಇರುವುದಿಲ್ಲ ಎಂದು ವೀಕ್ಷಕರಿಗೆ ಮೊದಲೇ ತಿಳಿಸಲಾಗಿತ್ತು. ಆದರೆ ಬಿಗ್ ಬಾಸ್ ಮನೆಯ ಒಳಗೆ ಇರುವ ಸ್ಪರ್ಧಿಗಳಿಗೆ ಈ ವಿಷಯ ತಿಳಿದಿರಲಿಲ್ಲ. ಹಾಗಾಗಿ ಅವರಿಗೆ ಎಂದಿನಂತೆ ಟೆನ್ಷನ್ ಇತ್ತು. ಆದರೆ ಈ ವಾರ ಎಲಿಮಿನೇಷನ್ ಇಲ್ಲ ಎಂದು ತಿಳಿದ ಬಳಿಕ ಎಲ್ಲರೂ ನಿಟ್ಟುಸಿರು ಬಿಟ್ಟು ಖುಷಿಯಾದರು.