ಬೆಂಗಳೂರು: ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿಯವರಿಗೆ ‘ಭಾರತ ರತ್ನ’ ಪ್ರಶಸ್ತಿ ಘೋಷಿಸಿದ ಕೇಂದ್ರ ಬಿಜೆಪಿ ಸರಕಾರದ ಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಸ್ವಾಗತಿಸಿದ್ದಾರೆ.
ಇದೊಂದು ಉತ್ತಮ ನಿರ್ಧಾರ. ಅರ್ಹತೆಯನ್ನು ಗುರುತಿಸಿ ಈ ಆಯ್ಕೆ ಮಾಡಲಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಅಡ್ವಾಣಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತರತ್ನವನ್ನು ಪ್ರಕಟಿಸಿದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದು, ಇದಕ್ಕಾಗಿ ಮೋದಿಜೀ ಮತ್ತು ಅವರ ಸಂಪುಟದ ಸದಸ್ಯರಿಗೆ ಧನ್ಯವಾದಗಳು ಮತ್ತು ಅಡ್ವಾಣಿಯವರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಅಡ್ವಾಣಿ ಅವರು ಭಾರತದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ಕೇಂದ್ರ ಗೃಹ ಸಚಿವ ಮತ್ತು ಮಾಹಿತಿ- ತಂತ್ರಜ್ಞಾನ ಸಚಿವರಾಗಿ ಅವರು ಸಮರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸಂಸದೀಯ ನಡೆಯೂ ಆದರ್ಶಪ್ರಾಯವಾಗಿವೆ ಎಂದು ವಿಜಯೇಂದ್ರ ಅವರು ಮೆಚ್ಚುಗೆ ಸೂಚಿಸಿದ್ದಾರೆ.